ಬೆಂಗಳೂರು:‘ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್‌ನ (ಡಿಡಿಯುಟಿಟಿಎಲ್) ₹ 47.10 ಕೋಟಿ ಅಕ್ರಮ’ ಪ್ರಕರಣದಲ್ಲಿ ಬಂಧಿಸಲಾಗಿರುವ ಮಾಜಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಎಸ್. ಶಂಕರಪ್ಪ ಅವರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿರುವ ಸಿಐಡಿ ಅಧಿಕಾರಿಗಳು, ವಹಿವಾಟು ಸ್ಥಗಿತಗೊಳಿಸಿದ್ದಾರೆ.
ವಿಲ್ಸನ್ ಗಾರ್ಡನ್ ಠಾಣೆಯಲ್ಲಿ 2023ರ ಸೆಪ್ಟೆಂಬರ್ 23ರಂದು ದಾಖಲಾಗಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾಗಿರುವ ಎಸ್. ಶಂಕರಪ್ಪ ಅವರನ್ನು ಸೋಮವಾರ ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳವರೆಗೆ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಮನೆಯಲ್ಲಿ ಶೋಧ: ‘ಡಿಡಿಯುಟಿಟಿಎಲ್‌ನಲ್ಲಿ 2021ರಿಂದ 2023ರ ಅವಧಿಯಲ್ಲಿ ನಡೆದಿರುವ ಅಕ್ರಮ ಸಂಬಂಧ ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ಆರೋಪಿ ಶಂಕರಪ್ಪ ಅವರ ಮನೆಯಲ್ಲಿ ಶೋಧ ನಡೆಸಲು ಅನುಮತಿ ಪಡೆಯಲಾಗಿತ್ತು. ಅದರಂತೆ ಮನೆಯಲ್ಲಿ ಶೋಧ ನಡೆಸಿ, ಹಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.
‘ಅಕ್ರಮಕ್ಕೆ ಸಂಬಂಧಪಟ್ಟ ಹಣವನ್ನು ಶಂಕರಪ್ಪ ಅವರು ಬಳಸಿಕೊಂಡಿರುವ ಹಾಗೂ ಇತರೆಡೆ ಹೂಡಿಕೆ ಮಾಡಿರುವ ಮಾಹಿತಿ ಇದೆ. ಹೀಗಾಗಿ, ಶಂಕರಪ್ಪ ಹಾಗೂ ಅವರ ಇಬ್ಬರು ಮಕ್ಕಳ ಬ್ಯಾಂಕ್ ಖಾತೆ ಜಪ್ತಿ ಮಾಡಲಾಗಿದೆ. ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆದು, ವಹಿವಾಟು ಸಹ ಸ್ಥಗಿತಗೊಳಿಸಲಾಗಿದೆ’ ಎಂದು ತಿಳಿಸಿವೆ.
ಮಹಜರು ಪ್ರಕ್ರಿಯೆ: ‘ಅಕ್ರಮಕ್ಕೆ ಸಂಬಂಧಪಟ್ಟಂತೆ ಕೆಲ ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ. ಶಂಕರಪ್ಪ ಅವರಿಂದ ಉತ್ತರ ಪಡೆಯಲಾಗುತ್ತಿದೆ. ಆರೋಪಿ ಹೇಳಿಕೆ ದಾಖಲಿಸಿಕೊಂಡು, ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.
‘ಪ್ರಕರಣದಲ್ಲಿ ಶಂಕರಪ್ಪ ಅವರ ಜೊತೆ, ಮತ್ತಷ್ಟು ಮಂದಿ ಭಾಗಿಯಾಗಿರುವ ಅನುಮಾನವಿದೆ, ಕೆಲವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೂ ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಅಕ್ರಮಕ್ಕೆ ನನಗೂ ಸಂಬಂಧವಿಲ್ಲ’: ಡಿ. ದೇವರಾಜ
ಅರಸು ಟ್ರಕ್ ಟರ್ಮಿನಲ್ ವ್ಯವಸ್ಥಾಪಕ ನಿರ್ದೇಶಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅಕ್ರಮಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಯಾರೋ ಮಾಡಿದ ತಪ್ಪನ್ನು ನನ್ನ ಮೇಲೆ ಹೂರಿಸಲಾಗಿದೆ’ ಎಂಬುದಾಗಿ ಶಂಕರಪ್ಪ ಅವರು ಸಿಐಡಿ ವಿಚಾರಣೆಯಲ್ಲಿ ಹೇಳಿರುವುದಾಗಿ ಗೊತ್ತಾಗಿದೆ. ‘1996ರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ್ದೇನೆ. ಶೈಕ್ಷಣಿಕ ಅರ್ಹತೆ ಹಾಗೂ ಸೇವಾ ಹಿರಿತನ ಆಧಾರದಲ್ಲಿ ವಾರ್ತಾ ಇಲಾಖೆಯ ಉಪನಿರ್ದೇಶಕನಾಗಿದ್ದೇನೆ. 2021ರ ನವೆಂಬರ್ 15 ರಿಂದ 2022ರ ಜುಲೈ 11ರವರೆಗೆ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ವ್ಯವಸ್ಥಾಪಕ ನಿರ್ದೇಶಕನಾಗಿದ್ದೆ. ಯಾವುದೇ ಆಪಾದನೆ ವಿಚಾರಣೆ ಇಲ್ಲದೇ ಕಾನೂನು ಪ್ರಕಾರವೇ ನಿಷ್ಠೆಯಿಂದ ಕೆಲಸ ಮಾಡಿ ಹೊರಗೆ ಬಂದಿದ್ದೇನೆ’ ಎಂದೂ ಶಂಕರಪ್ಪ ತಿಳಿಸಿರುವುದಾಗಿ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.