ಬೆಂಗಳೂರು: ‘ಕನ್ನಡದ ವಿಮರ್ಶಾ ಪರಂಪರೆಯಲ್ಲಿ ಸಿನಿಮಾವನ್ನು ಸಾಹಿತ್ಯದ ವಿಸ್ತೃತ ರೂಪವಾಗಿ ನೋಡಲಾಗುತ್ತಿದೆ. ಸಿನಿಮಾ, ಸಾಹಿತ್ಯದ ವಿಸ್ತೃತ ರೂಪವಲ್ಲ. ಮೂಲ ಕೃತಿಯನ್ನು ಸಿನಿಮಾಕ್ಕೆ ಹೋಲಿಸಿ ನೋಡುವುದೂ ಸರಿಯಾದ ಕ್ರಮವಲ್ಲ’ ಎಂದು ಸಿನಿಮಾ ನಿರ್ದೇಶಕ ಗಿರೀಶ ಕಾಸರವಳ್ಳಿ ಅಭಿಪ್ರಾಯಪಟ್ಟರು.
ಭಾನುವಾರ ನಗರದಲ್ಲಿ ನಡೆದ ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿ ಅವರ ‘ಸಿನಿಮಾವಲೋಕನ’ ಕಾರ್ಯಕ್ರಮದಲ್ಲಿ ಅವರ ‘ಚಿತ್ರ–ಮಂಥನ’, ‘ಕಣ್ಣು ಕಂಡ ಕ್ಷಣಗಳು’, ‘ದಕ್ಕಿದ್ದು–ಮಿಕ್ಕಿದ್ದು’ ಹಾಗೂ ‘ಫ್ರೇಮ್ಸ್ ಆಫ್ ಕನ್ಸೈನ್ಸ್’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಲ್ಲ ಕಲೆಗಳಿಗೂ ಅದರದ್ದೇ ಆದ ಶ್ರೇಷ್ಠತೆ ಇದೆ. ಹಾಗೆಯೇ ಮಿತಿಯೂ ಇದೆ. ಹಾಗಾಗಿ, ಕಲೆಗಳಲ್ಲಿ ಸಾಹಿತ್ಯವೇ ಶ್ರೇಷ್ಠ ಎಂಬ ನಂಬಿಕೆ ಸರಿಯಲ್ಲ’ ಎಂದು ಹೇಳಿದರು.
‘ಸಿನಿಮಾದ ಉದ್ದೇಶ ಕತೆ ಹೇಳುವುದಲ್ಲ. ಕತೆಯನ್ನು ರೂಪಕವಾಗಿ ಇಟ್ಟುಕೊಂಡು ಚಿಂತನೆ ಹಂಚಿಕೊಳ್ಳುವುದು’ ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕೃತಿ ಬಿಡುಗಡೆ ಮಾಡಿ, ‘ಸಿನಿಮಾಗಳು, ಕಾಯ್ದೆ, ಕಾನೂನುಗಳಂತಹ ಕ್ಲಿಷ್ಟ ಹಾಗೂ ಗಂಭೀರ ವಿಷಯಗಳನ್ನು ಸರಳವಾಗಿ ತಿಳಿಸುತ್ತವೆ’ ಎಂದು ಹೇಳಿದರು.
ನಿರ್ದೇಶಕ ಟಿ.ಎನ್.ಸೀತಾರಾಮ್, ‘ಶೇಷಾದ್ರಿಯವರು ತಮ್ಮ ಸಿನಿಮಾಗಳ ಮೂಲಕ ಬದುಕಿನ ಅಸಹಾಯಕತೆ, ಸಂಕಟವನ್ನು ಸಮರ್ಥವಾಗಿ ವೀಕ್ಷಕರಿಗೆ ಮುಟ್ಟಿಸಿದ್ದಾರೆ’ ಎಂದು ಹೇಳಿದರು.
ಪಿ.ಶೇಷಾದ್ರಿ ಮಾತನಾಡಿ, ‘ಬದುಕಿನ ಆರಂಭದ ದಿನಗಳು ಸಂಕಷ್ಟವಾಗಿದ್ದವು. ಒಳ್ಳೆಯ ಯೋಚನೆ ಜೊತೆಗೆ, ಅದೃಷ್ಟವೂ ಪ್ರೇರಕ ಶಕ್ತಿಯಾಯಿತು. ನನ್ನೊಂದಿಗೆ ಸ್ನೇಹಿತರು, ತಂತ್ರಜ್ಞರು, ನಿರ್ಮಾಪಕರು ನೆರವಾಗಿದ್ದಾರೆ. ಅವರಿಗೆ ಋಣಿಯಾಗಿದ್ದೇನೆ’ ಎಂದರು.
ನಿರ್ದೇಶಕರಾದ ರಾಜೇಂದ್ರಸಿಂಗ್ ಬಾಬು, ಟಿ.ಎಸ್.ನಾಗಾಭರಣ, ಹಿರಿಯ ನಟ ದತ್ತಣ್ಣ, ನಿರ್ಮಾಪಕ ಬಸಂತಕುಮಾರ್ ಪಾಟೀಲ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.