ADVERTISEMENT

ಪೈಪ್‌ಲೈನ್‌ಗೆ ಹಾನಿ ಮಾಡಿದರೆ ಕೇಸ್‌: ಭಾಸ್ಕರ್‌ರಾವ್‌ ಎಚ್ಚರಿಕೆ

ಗೇಲ್‌ ಅನಿಲ ಕಂಪನಿಯಿಂದ ಸುರಕ್ಷತಾ ಜಾಗೃತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 2:54 IST
Last Updated 25 ಡಿಸೆಂಬರ್ 2019, 2:54 IST
ವಿವೇಕ್‌ ವಾತೋಡ್ಕರ್‌(ಎಡದಿಂದ ಮೊದಲನೆಯವರು) ಹಾಗೂ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಹಸ್ತಲಾಘವ ಮಾಡಿದರು
ವಿವೇಕ್‌ ವಾತೋಡ್ಕರ್‌(ಎಡದಿಂದ ಮೊದಲನೆಯವರು) ಹಾಗೂ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ಹಸ್ತಲಾಘವ ಮಾಡಿದರು   

ಬೆಂಗಳೂರು:ನಗರದಲ್ಲಿ ಅನಿಲ ಪೂರೈಕೆ ವ್ಯವಸ್ಥೆಯಲ್ಲಿ ಕೈಗೊಳ್ಳಬೇಕಾದ ಸುರಕ್ಷತೆಯ ಕುರಿತುಭಾರತೀಯ ಅನಿಲ ಪ್ರಾಧಿಕಾರ (ಗೇಲ್) ಮಂಗಳವಾರ ಜಾಗೃತಿ ಕಾರ್ಯಾಗಾರ ಹಮ್ಮಿಕೊಂಡಿತ್ತು.

ನಗರ ಪೊಲೀಸ್‌ ಕಮಿಷನರ್‌ ಭಾಸ್ಕರ್‌ರಾವ್‌, ‘ಅನಿಲ ಪೂರೈಕೆಯಲ್ಲಿ ಹೆಚ್ಚು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನರಿಗೆ ಅನುಕೂಲಕರವಾದ ಕಾರ್ಯವನ್ನು ಗೇಲ್‌ ಮಾಡುತ್ತಿದೆ. ಆದರೆ, ಅನಿಲ ಪೈಪ್‌ಲೈನ್‌ಗಳನ್ನು ಹಾಳು ಮಾಡುವ ಅಥವಾ ಒಡೆಯುವ ಪ್ರಕರಣಗಳು ಹೆಚ್ಚುತ್ತಿವೆ. ಇಂಥವರ ವಿರುದ್ಧ ಕಂಪನಿ ದೂರು ನೀಡಿದರೆ ಕ್ರಿಮಿನಲ್‌ ಪ್ರಕರಣವನ್ನು ದಾಖಲಿಸಿಕೊಳ್ಳಲಾಗುತ್ತದೆ’ ಎಂದರು ಅವರು ಹೇಳಿದರು.

‘ರಾಜ್ಯವು ಜಲವಿದ್ಯುತ್‌ ಮೇಲೆ ಹೆಚ್ಚು ಅವಲಂಬಿತವಾಗಿದೆ. ಜಲವಿದ್ಯುತ್‌ನಿಂದ ಅನಿಲ ಆಧಾರಿತ ವಿದ್ಯುತ್‌ಗೆ ವ್ಯವಸ್ಥೆ ಬದಲಾದರೆ ಹೆಚ್ಚು ಅನುಕೂಲವಾಗಲಿದೆ. ದೆಹಲಿಯಲ್ಲಿ ಎಲೆಕ್ಟ್ರಿಕ್‌ ಚಿತಾಗಾರದ ಬದಲಿಗೆ, ಅನಿಲ ಚಿತಾಗಾರಗಳನ್ನು ರೂಪಿಸಲಾಗಿದೆ. ಈ ವ್ಯವಸ್ಥೆಗೆ ಬದಲಾಗುವುದು ಹೆಚ್ಚು ಕಠಿಣವೇನಲ್ಲ’ ಎಂದು ಅವರು ಹೇಳಿದರು.

ADVERTISEMENT

‘ನಮ್ಮ ಮೆಟ್ರೊ ರೈಲು ಕಾಮಗಾರಿ, ಜಲಮಂಡಳಿ ಪೈಪ್‌ಲೈನ್‌ ಅಳವಡಿಕೆ, ಮೇಲ್ಸೇತುವೆ ನಿರ್ಮಾಣದಂತಹ ಕಾರ್ಯಗಳು ನಗರದಲ್ಲಿ ನಡೆಯುತ್ತಿವೆ. ಈ ವೇಳೆ, ಅನಿಲ ಪೈಪ್‌ಲೈನ್‌ಗೆ ಹಾನಿ‌ಯಾಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಹೆಚ್ಚು ಜಾಗ್ರತೆ ವಹಿಸ
ಬೇಕಾಗಿದೆ’ ಎಂದರು.

‘ಅನಿಲ ಸೋರಿಕೆಯಿಂದ ಅವಘಡಗಳು ಸಂಭವಿಸಿದಾಗ ಮೊದಲು ಸ್ಥಳಕ್ಕೆ ಧಾವಿಸುವವರು ‘ಹೊಯ್ಸಳ’ ವಾಹನದ ಸಿಬ್ಬಂದಿ. ಹೀಗಾಗಿ, ಕಂಪನಿ ವತಿಯಿಂದ ಈ ಸಿಬ್ಬಂದಿಗೂ ಅವಘಡ ನಿರ್ವಹಣಾ ತರಬೇತಿ ನೀಡಿದರೆ ಉತ್ತಮ. ಅದೇ ರೀತಿ,ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿಯೂ ಈ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಬೇಕು. ನಾಲ್ಕು ಸಂಖ್ಯೆಗಳಿರುವ ಸಹಾಯವಾಣಿಯನ್ನು ರೂಪಿಸಿ, ಎಲ್ಲರಿಗೂ ಗೊತ್ತಾಗುವಂತೆ ಪ್ರಚಾರ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

ಗೇಲ್‌ ಮುಖ್ಯಪ್ರಧಾನ ವ್ಯವಸ್ಥಾಪಕ ವಿವೇಕ್‌ ವಾತೋಡ್ಕರ್‌, ‘ಪೈಪ್‌ಲೈನ್‌ ಮೂಲಕ ನಗರದಲ್ಲಿ 18 ಸಾವಿರ ಮನೆಗಳಿಗೆ ನೈಸರ್ಗಿಕ ಅಡುಗೆ ಅನಿಲವನ್ನು ಕಂಪನಿಯು ಪೂರೈಸುತ್ತಿದೆ. ಅಲ್ಲದೆ, 81 ಕೈಗಾರಿಕೆಗಳು ಮತ್ತು ವಾಣಿಜ್ಯ ಘಟಕಗಳಿಗೆ ಅನಿಲ ಪೂರೈಸಲಾಗುತ್ತಿದೆ.
ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಒಟ್ಟು 1,500 ಕಿ.ಮೀ. ಅನಿಲ ಪೂರೈಕೆ ಜಾಲವನ್ನು ಹೊಂದಿದ್ದೇವೆ’ ಎಂದು ಹೇಳಿದರು.

‘ವಿವಿಧ ಕಾಮಗಾರಿಗಾಗಿ ರಸ್ತೆ ಅಗೆಯುವ ವೇಳೆ ಅನಿಲ ಪೈಪ್‌ಲೈನ್‌ಗೆ ಹಾನಿಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಆದರೂ, ಹೀಗೆ, ಪೈಪ್‌ಲೈನ್‌ ಇದ್ದ ಜಾಗವನ್ನು ಅಗೆಯುವ ಸಂದರ್ಭದಲ್ಲಿ ಕಂಪನಿಗೆ ಮಾಹಿತಿ ನೀಡಬೇಕು. ಬಿಎಂಆರ್‌
ಸಿಎಲ್‌, ಜಲಮಂಡಳಿ ಅಥವಾ ಬಿಬಿಎಂಪಿ ಸೇರಿದಂತೆ ಯಾರೇ ಕಾಮಗಾರಿ ಕೈಗೆತ್ತಿಕೊಂಡರೂ ನಮಗೆ ಮಾಹಿತಿ ನೀಡಿದರೆ ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ಅಡುಗೆ ಅನಿಲ ಪೈಪ್‌ಲೈನ್‌ ಅನ್ನು ಕೂಡ ಸಾರ್ವಜನಿಕ ಆಸ್ತಿ ಎಂದೇ ಪರಿಗಣಿಸಬೇಕು’ ಎಂದರು.

ಸುರಕ್ಷತೆಗೆ ಗೇಲ್‌ ಕೈಗೊಂಡ ಕ್ರಮಗಳು

*ರಸ್ತೆಯ ಪ್ರತಿ 500 ಮೀಟರ್‌ಗೆ ವಾಲ್ವ್‌ಗಳನ್ನು ಅಳವಡಿಸಲಾಗಿದೆ

*ಎಲ್‌ಪಿಜಿಗಿಂತಲೂ ಗೇಲ್‌ ಅಭಿವೃದ್ಧಿಪಡಿಸಿರುವ ಅನಿಲ ಹೆಚ್ಚು ಸುರಕ್ಷಿತ

*ನೆಲದಡಿಯಲ್ಲಿನ ಪೈಪ್‌ಲೈನ್‌ ಮೇಲೆ ‘ವಾರ್ನಿಂಗ್‌ ಮ್ಯಾಟ್‌’ ಅಳವಡಿಕೆ.

*ಕಾಮಗಾರಿಗಾಗಿ ನೆಲ ಅಗೆಯುವವರಿಗೆ, ಅನಿಲ ಪೈಪ್‌ಲೈನ್‌ ಇರುವುದು ಈ ಮ್ಯಾಟ್‌ನಿಂದ ತಿಳಿಯಲಿದೆ

*ಅನಿಲ ಪೈಪ್‌ಲೈನ್‌ ಇರುವ ಕಡೆ ಎರಡು ಭಾಷೆಗಳಲ್ಲಿ ಸೂಚನಾ ಫಲಕ

*ತುರ್ತು ಸಹಾಯವಾಣಿ ವ್ಯವಸ್ಥೆ

*ತುರ್ತು ಸಂದರ್ಭಕ್ಕೆ ತಕ್ಷಣಕ್ಕೆ ಸ್ಪಂದಿಸುವ ವಾಹನಗಳ ವ್ಯವಸ್ಥೆ

*ಜಿಪಿಎಸ್‌ ಟ್ರ್ಯಾಕಿಂಗ್‌ ಮೂಲಕ ನಿತ್ಯ ಪೈಪ್‌ಲೈನ್‌ ಗಸ್ತು ವ್ಯವಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.