ಬೆಂಗಳೂರು: ನಗರದ ಪ್ರಥಮ ಹವಾಮಾನ ಕ್ರಿಯಾಯೋಜನೆ (ಸಿಎಪಿ) ಕರಡು ಸಿದ್ಧಪಡಿಸಲು ಬಿಬಿಎಂಪಿ ಸಜ್ಜಾಗಿದೆ.
ಮುಂಬೈ, ಚೆನ್ನೈ ನಂತರ ಬೆಂಗಳೂರು ಸಿಎಪಿ ಕರಡು ಸಿದ್ಧಪಡಿಸಲಿದ್ದು, 2050ರ ವೇಳೆಗೆ ‘ತಟಸ್ಥ ಇಂಗಾಲ(ಕಾರ್ಬನ್ ನ್ಯೂಟ್ರಲ್)’ ಸಾಧಿಸುವ ನಗರವಾಗಿಸುವ ನೀಲನಕ್ಷೆ ತಯಾರಾಗಲಿದೆ. 269 ಕ್ರಿಯೆಗಳನ್ನು ಒಳಗೊಂಡಿರುವ ಯೋಜನೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅಂತಿಮಗೊಳಿಸಲಾಯಿತು.
ಹವಾಮಾನ ವೈಪರೀತ್ಯ ಎದುರಿಸುವ ‘ಸಿ40 ನಗರಗಳ ಜಾಗತಿಕ ಸಂಪರ್ಕ ಜಾಲ’ದಲ್ಲಿ ಬೆಂಗಳೂರು ಸಹ–ನಾಯಕತ್ವವನ್ನು ಹೊಂದಿದೆ. ಈ ನಗರಗಳ ಪಟ್ಟಿಯಲ್ಲಿ ಮುಂಬೈ, ದೆಹಲಿ, ಕೊಲ್ಕತ್ತ, ಚೆನ್ನೈ, ಅಹಮದಾಬಾದ್ ನಗರಗಳೂ ಇವೆ.
ಗ್ಲೋಬಲ್ ಕನ್‌ಸ್ಟಲ್ಟೆಂಟ್ ಆಗಿರುವ ವರ್ಲ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ (ಡಬ್ಲ್ಯುಆರ್‌ಐ) 269 ಕ್ರಿಯೆಗಳ ಯೋಜನೆಗಳನ್ನು ಪ್ರಸ್ತುತಪಡಿಸಿತ್ತು. ಇಂಧನ, ಕಟ್ಟಡ, ಸಾರಿಗೆ, ಘನತ್ಯಾಜ್ಯ ನಿರ್ವಹಣೆ, ವಾಯು ಗುಣಮಟ್ಟ, ನೀರು, ನಗರ ಯೋಜನೆ, ಹಸಿರೀಕರಣ, ಜೀವವೈವಿಧ್ಯ ಮತ್ತು ವಿಪತ್ತು ನಿರ್ವಹಣೆ ಸೇರಿದಂತೆ ಹಲವು ಕ್ರಿಯೆಗಳನ್ನು ಈ ಯೋಜನೆ ಒಳಗೊಂಡಿದೆ. ಈ 269 ಕ್ರಿಯೆಗಳಲ್ಲಿ 143 ಕ್ರಿಯೆಗಳಿಗೆ ಬಿಬಿಎಂಪಿ ‘ಪ್ರಾಥಮಿಕವಾಗಿ’ ಜವಾಬ್ದಾರಿಯನ್ನು ಹೊಂದಿದೆ.
ನಗರದಲ್ಲಿ ಗ್ರೀನ್‌ಹೌಸ್ ಗ್ಯಾಸ್ (ಜಿಎಚ್‌ಜಿ) ಹೊರಸೂಸುವಿಕೆಯನ್ನು ಕಡಿತಗೊಳಿಸುವುದು, ಹವಾಮಾನ ಬದಲಾವಣೆಯಿಂದ ಉಂಟಾಗುವ ವೈಪರೀತ್ಯಗಳ ವಿರುದ್ಧ ಸ್ಥಿತಿಸ್ಥಾಪಕವನ್ನು ನಿರ್ಮಿಸುವುದು ‘ಬೆಂಗಳೂರು ಹವಾಮಾನ ಕ್ರಿಯಾಯೋಜನೆ’ಯ ಪ್ರಮುಖ ಉದ್ದೇಶವಾಗಿದೆ. 30 ವರ್ಷಗಳ ಹವಾಮಾನವನ್ನು ವಿಮರ್ಶಿಸಿ ಡಬ್ಲ್ಯುಆರ್‌ಐ ನಗರಗಳ ಜಿಎಚ್‌ಜಿ ಮಟ್ಟವನ್ನು 2019ರಲ್ಲಿ ಸಿದ್ಧಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಮುಖ ಉದ್ದೇಶಗಳು
* ನಗರವನ್ನು ಶೇ 90ರಷ್ಟು ಸಾರಿಗೆ ಆಧಾರಿತ ಅಭಿವೃದ್ಧಿ ಪ್ರದೇಶವನ್ನಾಗಿಸುವುದು.
* ಶೇ 75ರಷ್ಟು ಬಸ್‌ಗಳು, ಶೇ 90ರಷ್ಟು ಕಾರುಗಳು ಮತ್ತು ಬೈಕ್‌ಗಳು, ಶೇ 50ರಷ್ಟು ಸಾಗಣೆ ವಾಹನಗಳು 2050ರ ವೇಳೆಗೆ ಎಲೆಕ್ಟ್ರಿಕ್ ಅಥವಾ ಹೈಡ್ರೊಜನ್‌ನಿಂದ ಚಲಿಸಬೇಕು
* ಆರ್‌ಎಂಪಿ 2041 ಅನ್ನು ಸಿದ್ಧಪಡಿಸಿ, ಅಳವಡಿಸಿಕೊಳ್ಳುವುದು. ಇದಕ್ಕಾಗಿ ಮಾಸ್ಟರ್ ಪ್ಲಾನ್ ಸಮಿತಿಯನ್ನು 2025ರೊಳಗೆ ರಚಿಸುವುದು.
* ನಗರದಲ್ಲಿ ‘ಹಸಿರು ಹೊದಿಕೆ’ಯನ್ನು 2030ರ ವೇಳೆಗೆ ಶೇ 10 ಹಾಗೂ 2040ರ ವೇಳೆಗೆ ಶೇ 20ರಷ್ಟು ವೃದ್ಧಿಸುವುದು.
* ಹಸಿರೀಕರಣವನ್ನು ಶೇ 40ರಷ್ಟು ವೃದ್ಧಿಸಿಕೊಂಡು, ನಗರವನ್ನು 2040ರ ವೇಳೆಗೆ ‘ಸ್ಪಾಂಜ್ ಸಿಟಿ’ಯನ್ನಾಗಿಸುವುದು.
* ನಗರದಲ್ಲಿ ಪ್ರಸ್ತುತ ಪ್ರತಿ ವ್ಯಕ್ತಿಗೆ ಸಾರ್ವಜನಿಕ ಬಳಕೆಯ ಪ್ರದೇಶ 2.2 ಚದರ ಮೀಟರ್ ಇದ್ದು, ಅದನ್ನು 2050ರ ವೇಳೆಗೆ 6 ಚದರ ಮೀಟರ್‌ಗೆ ವೃದ್ಧಿಸುವುದು.
* ನಗರದಲ್ಲಿ ವಿದ್ಯುತ್ ಉತ್ಪಾದನೆ ಗ್ರಿಡ್‌ಗಳನ್ನು 2050ರ ವೇಳೆಗೆ ಶೇ 90ರಷ್ಟು ಹೆಚ್ಚಿಸುವುದು.
* 2030ರ ವೇಳೆಗೆ ಶೇ 42ರಷ್ಟು ಹೊಸ ವಸತಿ ಕಟ್ಟಡಗಳು, ಶೇ 48ರಷ್ಟು ಹೊಸ ವಾಣಿಜ್ಯ ಕಟ್ಟಡಗಳು, ಮೇಲ್ಚಾವಣಿ ನಿರ್ಮಾಣಕ್ಕೆ ಇನ್ಸುಲೇಟೆಡ್ ತಂತ್ರಜ್ಞಾನ ಬಳಸುವುದು.
* ವಾರ್ಡ್ ಮಟ್ಟದಲ್ಲಿ ಘನತ್ಯಾಜ್ಯ ನಿರ್ವಹಣೆಯ ಮೈಕ್ರೊ ಪ್ಲಾನ್ ಅನ್ನು 2025ಕ್ಕೆ ಅನುಷ್ಠಾನಗೊಳಿಸುವುದು.
* 2027ರ ವೇಳಗೆ ಶೇ 100ರಷ್ಟು ತ್ಯಾಜ್ಯ ವಿಂಗಡಣೆ, ತ್ಯಾಜ್ಯ ಸುರಿಯುವುದರಿಂದ ಮುಕ್ತವಾಗುವುದು.
* ಮುಚ್ಚಿಹೋಗಿರುವ ಭೂಭರ್ತಿ ಸ್ಥಳಗಳನ್ನು 2030ರೊಳಗೆ ‘ಹಸಿರು ತಾಣ ಅಥವಾ ಉದ್ಯಾನ’ಗಳನ್ನಾಗಿ ಪರಿವರ್ತಿಸುವುದು.
*2026ರ ವೇಳೆಗೆ ವಾಯು ಮಾಲಿನ್ಯ ಮಟ್ಟವನ್ನು ಶೇ 40ರಷ್ಟು ಕಡಿತಗೊಳಿಸುವುದು.
* 2025ರ ವೇಳೆಗೆ ಎಲ್ಲರಿಗೂ ನೀರು ಮತ್ತು ಒಳಚರಂಡಿ ಸೌಲಭ್ಯ ಕಲ್ಪಿಸುವುದು.
* ಶೇ 60ರಷ್ಟು ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲು ತಂತ್ರಜ್ಞಾನ ಅಳವಡಿಸಿಕೊಳ್ಳುವುದು. 2050ರ ವೇಳೆಗೆ ಶೇ 35ರಷ್ಟು ನೀರನ್ನು ಮರುಬಳಕೆ ಮಾಡಿಕೊಳ್ಳುವುದು.
* 2030ರ ವೇಳೆಗೆ ಎಲ್ಲ ಕೆರೆಗಳು ಮತ್ತು ಜಲಮೂಲಗಳನ್ನು ಪುನರುಜ್ಜೀವನಗೊಳಿಸುವುದು.
* ವಿಪತ್ತು ಸಂಕಷ್ಟ ಕಡಿತ ಯೋಜನೆಯನ್ನು ಅಳವಡಿಸಿಕೊಂಡು ನಗರಮಟ್ಟದ ವಿಪತ್ತು ನಿರ್ವಹಣೆ ಯೋಜನೆಯನ್ನು 2025ರೊಳಗೆ ಸದೃಢಗೊಳಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.