ADVERTISEMENT

ಬೆಂಗಳೂರು | 66 ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಾಣ: BBMPಗೆ ಪೊಲೀಸರ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 23:39 IST
Last Updated 8 ಜುಲೈ 2024, 23:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಹಾಗೂ ವಾಹನ ದಟ್ಟಣೆ ಹೆಚ್ಚಿರುವ 60ಕ್ಕೂ ಹೆಚ್ಚು ಪ್ರಮುಖ ರಸ್ತೆ ಮತ್ತು ಜಂಕ್ಷನ್‌ಗಳಲ್ಲಿ ಸ್ಕೈವಾಕ್‌ ನಿರ್ಮಿಸಬೇಕೆಂದು ನಗರ ಸಂಚಾರ ವಿಭಾಗದ ಪೊಲೀಸರು ಬಿಬಿಎಂಪಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.

ಪಾದಚಾರಿಗಳು ರಸ್ತೆ ದಾಟಲು ಅನುಕೂಲ ಕಲ್ಪಿಸುವ ಹಾಗೂ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದಕ್ಕಾಗಿ ಸ್ಕೈವಾಕ್‌ ನಿರ್ಮಿಸುವಂತೆ ಪ್ರಸ್ತಾವದಲ್ಲಿ ಶಿಫಾರಸು ಮಾಡಲಾಗಿದೆ.

ಜಾಲಹಳ್ಳಿ, ಗೊರಗುಂಟೆಪಾಳ್ಯ, ಎಸ್‌ಆರ್‌ಎಸ್‌ ಜಂಕ್ಷನ್ ಸೇರಿ 30 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆಯಿರುವ 66 ಸ್ಥಳಗಳನ್ನು ಸ್ಕೈವಾಕ್ ನಿರ್ಮಿಸಲು ಉದ್ದೇಶಿಸಲಾಗಿದೆ. 

ADVERTISEMENT

ಈ ವರ್ಷದ ಜನವರಿಯಲ್ಲಿ ಇದೇ ರೀತಿಯ ಸಂಚಾರ ದಟ್ಟಣೆಯ ಸ್ಥಳಗಳನ್ನು ನಗರ ಸಂಚಾರ ಪೊಲೀಸರು ಗುರುತಿಸಿದ್ದರು. ಅದರಲ್ಲಿ 11 ಸ್ಥಗಳಗಳನ್ನು ‘ಬ್ಲ್ಯಾಕ್‌ ಸ್ಪಾಟ್‌’ ಎಂದು ಉಲ್ಲೇಖಿಸಿದ್ದರು. ಈ ಸ್ಥಳಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿದ್ದು, ವಾಹನ ಸಂಚಾರಕ್ಕೂ ಅಡೆತಡೆಯಾಗುತ್ತಿದೆ. ಹೀಗಾಗಿ, ಇಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸುವಂತೆ ಬಿಬಿಎಂಪಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು.

ಪೊಲೀಸರ ಸಲಹೆ ಮೇರೆಗೆ, 11 ಸ್ಥಳಗಳಲ್ಲಿ ಸ್ಕೈವಾಕ್‌ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಬಿಬಿಎಂಪಿ ಟೆಂಡರ್‌ ಆಹ್ವಾನಿಸಿತ್ತು. ಮೂರು ತಿಂಗಳಲ್ಲಿ ವರದಿ ನೀಡುವಂತೆಯೂ ಸೂಚಿಸಿತ್ತು. ಈವರೆಗೆ ವರದಿ ಸಲ್ಲಿಕೆಯಾಗಿಲ್ಲ. ಸ್ಕೈವಾಕ್‌ ನಿರ್ಮಾಣ ಕಾಮಗಾರಿಯೂ ಆರಂಭವಾಗಿಲ್ಲ. ಈ ನಡುವೆ ಹೊಸದಾಗಿ 66 ಕಡೆಗಳಲ್ಲಿ ಸ್ಕೈವಾಕ್‌ ನಿರ್ಮಿಸಲು ನಗರ ಸಂಚಾರ ಪೊಲೀಸರು ಮತ್ತೊಂದು ಪ್ರಸ್ತಾವವನ್ನು ಬಿಬಿಎಂಪಿಗೆ ಸಲ್ಲಿಸಿದ್ದಾರೆ.

‘ತುಮಕೂರು ರಸ್ತೆಯಲ್ಲಿ ಗೊರಗುಂಟೆಪಾಳ್ಯ, ಎಸ್‌ಆರ್‌ಎಸ್‌ ಜಂಕ್ಷನ್, ಜಾಲಹಳ್ಳಿ ವೃತ್ತದಲ್ಲಿ ಹೆಚ್ಚು ದಟ್ಟಣೆಯಿದೆ. ಪಾದಚಾರಿಗಳು ರಸ್ತೆ ದಾಟುವುದಕ್ಕೆ ಸಾಹಸಪಡುತ್ತಾರೆ. ಈ ಸ್ಥಳಗಳಲ್ಲಿ ಕೆಳಸೇತುವೆ ಅಥವಾ ಸ್ಕೈವಾಕ್ ಅಗತ್ಯವಿದೆ’ ಎಂದು ನಗರ ಸಂಚಾರ ಪೊಲೀಸ್‌ ವಿಭಾಗದ ಜಂಟಿ ಕಮಿಷನರ್‌ ಎಂ.ಎನ್‌.ಅನುಚೇತ್ ತಿಳಿಸಿದರು.

ಹೆಚ್ಚು ಅಪಘಾತಗಳು ಸಂಭವಿಸಿರುವ ಹಾಗೂ ದಟ್ಟಣೆಯಿರುವ ಸ್ಥಳಗಳನ್ನು ಸ್ಕೈವಾಕ್‌ ನಿರ್ಮಾಣಕ್ಕೆ ಗುರುತಿಸಿದ್ದೇವೆ. ಸ್ಥಳಾವಕಾಶ ಆಧರಿಸಿ ಅಂಡರ್‌ಪಾಸ್‌ ಅಥವಾ ಸ್ಕೈವಾಕ್ ಯಾವುದನ್ನಾದರೂ ನಿರ್ಮಿಸಬಹುದು.
–ಎಂ.ಎನ್.ಅನುಚೇತ್ ಡಿಸಿಪಿ ಸಂಚಾರ ವಿಭಾಗ
ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಜಾಲಹಳ್ಳಿ ಕ್ರಾಸ್‌ನಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ರಸ್ತೆ ಪಕ್ಕದ ಕೆಲವು ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಚುನಾವಣೆ ನಂತರ ಕೆಲಸ ಮುಂದುವರಿಸಲಿಲ್ಲ. ವಾಹನ ದಟ್ಟಣೆಯ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಬೇಗ ಅಂಡರ್‌ಪಾಸ್ ನಿರ್ಮಾಣವಾಗಬೇಕು.
– ವಿನಯ್ (ಅನಿಲ್) ಮೆಡಿಕಲ್ ಸ್ಟೋರ್ ಉದ್ಯೋಗಿ ಜಾಲಹಳ್ಳಿ ಕ್ರಾಸ್
ಮಂದಗತಿ ಕಾಮಗಾರಿ
ಸ್ಕೈವಾಕ್‌ಗಳ ನಿರ್ಮಾಣಕ್ಕೆ ಹೊಸ ಪ್ರಸ್ತಾವ ಸಲ್ಲಿಸುವ ಮುನ್ನವೇ ಅತ್ಯಂತ ದಟ್ಟಣೆ ಪ್ರದೇಶಗಳಲ್ಲಿ ಒಂದಾಗಿರುವ ಜಾಲಹಳ್ಳಿ ಜಂಕ್ಷನ್‌ನಲ್ಲಿ ‘ಗ್ರೇಡ್‌ ಸೆಪರೇಟರ್‌’ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈಗಲೂ ಕಾಮಗಾರಿ ಕುಂಟುತ್ತಾ ಸಾಗಿದೆ. ಜಾಲಹಳ್ಳಿಯ ಎಸ್‌.ಎಂ. ರಸ್ತೆಯಿಂದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ (ಜಾಲಹಳ್ಳಿ ಕ್ರಾಸ್‌) ಸಂಪರ್ಕ ಕಲ್ಪಿಸುವ ಈ ಗ್ರೇಡ್‌ ಸೆಪರೇಟರ್‌ ಕಾಮಗಾರಿಗೆ 2019ರಲ್ಲೇ ಯೋಜನೆ ರೂಪಿಸಲಾಗಿತ್ತು. ₹ 57 ಕೋಟಿ ವೆಚ್ಚದ ಕಾಗಾರಿಗೆ ಟೆಂಡರ್‌ ಪ್ರಕ್ರಿಯೆ ನಡೆಸಿ 24 ತಿಂಗಳ ಕಾಲಾವಧಿ ನಿಗದಿ ಪಡಿಸಲಾಗಿತ್ತು. ರಸ್ತೆಯ ಎರಡು ಬದಿಗಳಲ್ಲಿದ್ದ ಕಟ್ಟಡಗಳನ್ನು ತೆರವುಗೊಳಿಸಿದ್ದು ಬಿಟ್ಟರೆ ಗುರುತಿಸುವಂತಹ ಪ್ರಗತಿ ಕಂಡಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ‘ಸದಾ ವಾಹನಗಳು ಹಾಗೂ ಜನರಿಂದ ಗಿಜಿಗುಡುವ ಈ ಜಂಕ್ಷನ್‌ನಲ್ಲಿ ಹೆದ್ದಾರಿ ದಾಟಲು ಸರಿಯಾದ ವ್ಯವಸ್ಥೆಯಿಲ್ಲ. ಪಾದಚಾರಿಗಳು ಆತಂಕದಿಂದಲೇ ರಸ್ತೆ ದಾಟುತ್ತಾರೆ. ಹಲವು ವರ್ಷಗಳಿಂದಲೂ ಈ ಸಮಸ್ಯೆಗೆ ಮುಕ್ತಿಯೇ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.