ರಾಜರಾಜೇಶ್ವರಿ ನಗರ: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಮೂರು ಪ್ರವೇಶ ದ್ವಾರಗಳು ಹಾಗೂ ಸುತ್ತಲಿನ ರಸ್ತೆಗಳಲ್ಲಿ ಬಿದ್ದಿದ್ದ ತ್ಯಾಜ್ಯ ಸಂಗ್ರಹಿಸಿ, ಸ್ವಚ್ಛಗೊಳಿಸಲಾಯಿತು.
ಬಿಬಿಎಂಪಿ ಘನತ್ಯಾಜ್ಯ ವಿಭಾಗ, ಎಂಪ್ರಿ, ಅರಣ್ಯ, ಪೊಲೀಸ್ ಇಲಾಖೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ 350 ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಪ್ಲಾಸ್ಟಿಕ್ ಕವರ್, ಬಾಟಲ್ ಮತ್ತು ಒಣತ್ಯಾಜ್ಯ ಸೇರಿ ಸುಮಾರು 1400 ಕೆ.ಜಿ. ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯದ ಆವರಣವನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜರಾಜೇಶ್ವರಿ ವಲಯದ ಬಿಬಿಎಂಪಿ ಜಂಟಿ ಆಯುಕ್ತ ಅಜಯ್ ವಿ.,‘ಇತ್ತೀಚಿನ ದಿನಗಳಲ್ಲಿ ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ಲಾಸ್ಟಿಕ್ ಬಿಸಾಡುವವರ ಸಂಖ್ಯೆ ಹೆಚ್ಚಾಗಿದೆ. ವಿಶ್ವವಿದ್ಯಾಲಯದವರು ಸೂಕ್ತ ಕ್ರಮ ಕೈಗೊಂಡು, ತ್ಯಾಜ್ಯ ಹರಡುವುದನ್ನು ತಪ್ಪಿಸಬೇಕು. ವಿಶ್ವವಿದ್ಯಾಲಯದ ಪ್ರವೇಶ ದ್ವಾರಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಿ ಕಸ ಬಿಸಾಡುವವರ ಬಗ್ಗೆ ನಿಗಾವಹಿಸುವಂತೆ ಮನವಿ ಮಾಡಿದರು.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಬಿ.ಪಿ.ರವಿ, ಕುಲಪತಿ ಡಾ.ಎಸ್. ಎಂ.ಜಯಕರ್, ಬಿಬಿಎಂಪಿ ಘನ ತ್ಯಾಜ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಪೂರ್ಣಿಮಾ, ಭೀಮೇಶ್ ಸ್ಚಚ್ಛತೆ ಪ್ರಕ್ರಿಯೆಯಲ್ಲಿ ಭಾಗಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.