ಪ್ರಜಾವಾಣಿ ವಾರ್ತೆ
ಬೆಂಗಳೂರು: ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಲು ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ (ಬಿಎಸ್‌ಡಬ್ಲ್ಯುಎಂಎಲ್) ಘಟಕದ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಮಾಮಣಿ ನೇತೃತ್ವದಲ್ಲಿ ಜಾಥಾ ಹಮ್ಮಿಕೊಳ್ಳಲಾಯಿತು.
‘ಎಲ್ಲೆಂದರಲ್ಲಿ ಕಸ ಎಸೆಯಬಾರದು. ಉತ್ಪತ್ತಿಯಾಗುವ ತ್ಯಾಜ್ಯವನ್ನು ಪ್ರತ್ಯೇಕ ಚೀಲಗಳಲ್ಲಿ ಸಂಗ್ರಹಿಸಿ ಪಾಲಿಕೆಯಿಂದ ಬರುವ ವಾಹನಕ್ಕೆ ನೀಡಬೇಕು’ ಎಂದು ಹಣ್ಣು, ಸೊಪ್ಪು ಮತ್ತು ತರಕಾರಿ ಮಾರಾಟಗಾರರಿಗೆ ಮನವಿ ಮಾಡಲಾಯಿತು.
ಸ್ವಚ್ಛತೆ ಕಾಪಾಡದೇ ಇದ್ದರೆ ಸಾರ್ವಜನಿಕರ ಓಡಾಟ ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಮುಂದಿನ ದಿನಗಳಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ನವರಾತ್ರಿ ಹಾಗೂ ದೀಪಾವಳಿ ಹಬ್ಬದಿಂದಾಗಿ ಮಾರುಕಟ್ಟೆಗೆ ಬರುವ ಜನರ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ತ್ಯಾಜ್ಯದ ಉತ್ಪಾದನೆಯೂ ಹೆಚ್ಚಾಗಲಿದೆ. ಎಲ್ಲೆಂದರಲ್ಲಿ ಕಸ ಬಿಸಾಡಬಾರದು ಎಂದು ಸೂಚನೆ ನೀಡಲಾಯಿತು.
ಬಿಎಸ್‌ಡಬ್ಲ್ಯುಎಂಎಲ್ ಉಪ ಪ್ರಧಾನ ವ್ಯವಸ್ಥಾಪಕ ಭೀಮೇಶ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಸಂತೋಷ್, ಪೌರಕಾರ್ಮಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.