ಬೆಂಗಳೂರು: ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಆರ್ಥಿಕ ಸಂಸ್ಥೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಅಂತರರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ದಿನದ ಅಂಗವಾಗಿ ನಡೆಯುತ್ತಿರುವ ‘ಉಬುಂಟು’ ಮಹಿಳಾ ಸಮಾವೇಶವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳಾ ಉದ್ದಿಮೆದಾರರಿಗೆ ಪ್ರತ್ಯೇಕ ಆರ್ಥಿಕ ಸಂಸ್ಥೆ ಪ್ರಾರಂಭಿಸಲು ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಗುರಿಯಾಗಿಸಿ ಆರ್ಥಿಕ ಸಂಸ್ಥೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ’ ಎಂದರು.
‘ಹಳ್ಳಿಗಳಲ್ಲಿನ ಮಹಿಳಾ ಸ್ವಸಹಾಯ ಸಂಘಗಳ ಮಾದರಿಯಲ್ಲಿ ಹೊಸ ಸಂಘಗಳನ್ನು ರಚಿಸಲಾಗುವುದು. ಅಂಧ ಮತ್ತು ಅಂಗವಿಕಲ ಮಹಿಳೆಯರಿಗೆ ಉದ್ಯೋಗ ನೀಡಲು ವಿಶೇಷ ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.
ಸಚಿವ ಮುರುಗೇಶ್ ನಿರಾಣಿ, ‘ಗುಡಿ ಕೈಗಾರಿಕೆಯಿಂದ ದೊಡ್ಡ ಕೈಗಾರಿಕೆ ತನಕ ಮಹಿಳೆಯರು ಮುಂಚೂಣಿಯಲ್ಲಿರಬೇಕು. ಮಹಿಳೆಯರ ಉದ್ಯಮಶೀಲತಾ ಚಟುವಟಿಕೆಗಳಿಗೆ ಶೇ 4ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ’ ಎಂದು ಹೇಳಿದರು.
25 ಮಹಿಳೆಯರಿಂದ ಪ್ರಾರಂಭವಾದ ‘ಉಬುಂಟು’ ಮಹಿಳಾ ಉದ್ದಿಮೆದಾರರ ಸಂಘಟನೆ ಈಗ 30 ರಾಜ್ಯಗಳಿಗೆ ವ್ಯಾಪಿಸಿದೆ ಎಂದು ‘ಉಬುಂಟು’ ಅಧ್ಯಕ್ಷೆ ಕೆ. ರತ್ನಪ್ರಭಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.