ADVERTISEMENT

ಬಸವತತ್ವದ ಅರಿವಿನ ತಾಣವಾಗಲಿ ಕೂಡಲಸಂಗಮ: ಬಸವರಾಜ ಬೊಮ್ಮಾಯಿ

ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 19:53 IST
Last Updated 7 ಜುಲೈ 2022, 19:53 IST
   

ಬೆಂಗಳೂರು: ಬಸವಣ್ಣನವರ ಐಕ್ಯಸ್ಥಳವಾಗಿರುವ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮವು ಜನಾಕರ್ಷಣೆಯ ಕೇಂದ್ರವಾಗುವ ಜತೆಗೆ ಬಸವ ತತ್ವದ ಅರಿವು ಮೂಡಿಸುವ ತಾಣವೂ ಆಗಬೇಕು. ಇದಕ್ಕೆ ಪೂರಕವಾಗಿ ಸಂಗಮವನ್ನು ಅಭಿವೃದ್ಧಿ ಪಡಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಭೆಯನ್ನು ಗುರುವಾರ ನಡೆಸಿದ ಅವರು,ಕೂಡಲ ಸಂಗಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮ್ಯೂಸಿಯಂನಲ್ಲಿ ಬಸವಣ್ಣನವರ ಜೀವನಚರಿತ್ರೆ, ಅವರ ವಿಚಾರಧಾರೆ ಹಾಗೂ ಅವರ ಸಮಕಾಲೀನ ಶರಣರ ಕುರಿತ ಮಾಹಿತಿಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.

ಮೊದಲ ಹಂತದ ಕಾಮಗಾರಿಯನ್ನು ಮೇ ಅಂತ್ಯದೊಳಗೆ ಮುಗಿಸಬೇಕು. ಬಸವ ಅಂತರರಾಷ್ಟ್ರೀಯ ಕೇಂದ್ರದ ಕಟ್ಟಡದ ಪರಿಷ್ಕೃತ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಪರಿಷ್ಕೃತ ಅಂದಾಜನ್ನು ಅನುಮೋದನೆಗಾಗಿ ಸಲ್ಲಿಸುವಂತೆ ಸೂಚನೆ ನೀಡಿದರು.

ADVERTISEMENT

ಸರ್ವಜ್ಞರ ಮನೆ ಅಭಿವೃದ್ಧಿ: ಹಾವೇರಿ ಜಿಲ್ಲೆಯ ಅಬಲೂರಿನಲ್ಲಿ ಕವಿ ಸರ್ವಜ್ಞರು ವಾಸವಿದ್ದ ಮನೆಯ ಅಭಿವೃದ್ಧಿ ಹಾಗೂ ಮಾಸೂರಿನಲ್ಲಿರುವ ಸಮಾಧಿ ಸ್ಥಳ ಅಭಿವೃದ್ಧಿಪಡಿಸುವ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ₹25 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.

ಹಿರೇಕೆರೂರು ಪಟ್ಟಣದಲ್ಲಿ ಸರ್ವಜ್ಞ ಅಧ್ಯಯನ ಕೇಂದ್ರ ಸ್ಥಾಪನೆ ಹಾಗೂ ಸರ್ವಜ್ಞರ ಮನೆಯ ಸ್ಥಳ ಹಾಗೂ ಮಾಸೂರಿನ ಸಮಾಧಿ ಸ್ಥಳದ ಅಭಿವೃದ್ಧಿಗೆ ಬೇಕಿರುವ ಖಾಸಗಿ ಜಮೀನು ಖರೀದಿಸಲು ಸಭೆ ಅನುಮೋದನೆ ನೀಡಿದೆ.

ಸವಣೂರು ಅರಮನೆ ಪುನರುಜ್ಜೀವನ :ಶಿಥಿಲಾವಸ್ಥೆಯಲ್ಲಿದ್ದ ಸವಣೂರು ನವಾಬರ ಅರಮನೆ ಪುನರುಜ್ಜೀವನ ಕಾರ್ಯ ಪೂರ್ಣಗೊಂಡಿದ್ದು, ಇಲ್ಲಿ ಸ್ಥಳೀಯ ಇತಿಹಾಸವನ್ನು ನೆನಪಿಸುವ ವಸ್ತು ಸಂಗ್ರಹಾಲಯ ಸ್ಥಾಪಿಸಲು ಮುಖ್ಯಮಂತ್ರಿ ಸೂಚಿಸಿದರು.

ಕಿತ್ತೂರು ಅಭಿವೃದ್ಧಿಗೆ ₹45.56 ಕೋಟಿ

ಕಿತ್ತೂರಿನ ರಾಣಿ ಚೆನ್ನಮ್ಮನವರ ಅರಮನೆ, ಕೋಟೆ ಅಭಿವೃದ್ಧಿ ಹಾಗೂ ವಸ್ತು ಸಂಗ್ರಹಾಲಯಗಳ ನವೀಕರಣ ಯೋಜನೆಯನ್ನು ₹45.56 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಈ ಯೋಜನೆಗಳಿಗೆ ಒಪ್ಪಿಗೆ ಸೂಚಿಸಲಾಗಿದೆ.

₹18.05 ಕೋಟಿ ವೆಚ್ಚದಲ್ಲಿ ಚೆನ್ನಮ್ಮನವರ ಅರಮನೆ, ಕೋಟೆಯ ಸಂರಕ್ಷಣೆ ಹಾಗೂ ಮರು ನಿರ್ಮಾಣಮತ್ತು ವಸ್ತು ಸಂಗ್ರಹಾಲಯದ ನವೀಕರಿಸುವ ಜತೆಗೆ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ₹27.51 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.

ಕಿತ್ತೂರು ಸಂಸ್ಥಾನದ ಸಂಪೂರ್ಣ ಕಥೆಯನ್ನು ಬಿಂಬಿಸುವಂತೆವಸ್ತು ಸಂಗ್ರಹಾಲಯದಲ್ಲಿ ರೂಪಿಸಬೇಕು. ಪ್ರತಿ ಪಾತ್ರಕ್ಕೂ ಸಮಾನ ಮಹತ್ವವನ್ನು ನೀಡಬೇಕು. ಕಿತ್ತೂರು ಅರಮನೆಯ ದರ್ಬಾರಿನ ಪ್ರತಿರೂಪವನ್ನು ನಿರ್ಮಿಸಲು ಹುಬ್ಬಳ್ಳಿಯ ಮೂರು ಸಾವಿರ ಮಠ ಹಾಗೂ ಅಮ್ಮಿನಭಾವಿ ಮಠಗಳ ವಾಸ್ತುಶಿಲ್ಪವನ್ನು ಅಧ್ಯಯನ ಮಾಡುವಂತೆ ಬೊಮ್ಮಾಯಿ ಸಲಹೆ ನೀಡಿದರು.

ರಾಯಣ್ಣ ಸೈನಿಕ ಶಾಲೆಗೆ ಮೂಲಸೌಕರ್ಯ

ಬೆಳಗಾವಿ ಜಿಲ್ಲೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ ಕಾಮಗಾರಿಯು ಆಗಸ್ಟ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ಈ ವಸತಿಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚಿಸಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ’ರಕ್ಷಣಾ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 2022-23ನೇ ಸಾಲಿಗೆ 6ನೇ ತರಗತಿಯಿಂದ ಶಾಲೆಯನ್ನು ಪ್ರಾರಂಭಿಸಲು ಅನುಮತಿ ದೊರೆತಿದೆ. 82 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಶಾಲೆ ಪ್ರಾರಂಭವಾಗಲಿದೆ‘ ಎಂದರು.

ಈ ವಸತಿಶಾಲೆಗೆ ಬೇಕಾದ ಹುದ್ದೆಗಳ ಸೃಜನೆಗೆ ಸರ್ಕಾರ ಅನುಮೋದನೆ ನೀಡಿದೆ. ಸದ್ಯಕ್ಕೆ ಮೊರಾರ್ಜಿ ದೇಸಾಯಿ ವಸತಿಶಾಲೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಸೈನಿಕ ಶಾಲೆಯ ಹುದ್ದೆಗಳಿಗಾಗಿ ವೃಂದ
ಮತ್ತು ನೇಮಕಾತಿ ನಿಯಮಗಳನ್ನೂ ರೂಪಿಸಲಾಗಿದ್ದು, ಇದಕ್ಕೆ
ಅನುಮೋದನೆ ದೊರಕಿದ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ
ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.