ADVERTISEMENT

ಲೋಕಸಭಾ ಚುನಾವಣೆ | ಸಿ.ಎಂ, ಡಿಸಿಎಂ ಸಮರ್ಥ ಅಭ್ಯರ್ಥಿಗಳು: ಸಚಿವ ಮಹದೇವಪ್ಪ

ಶಿವಕುಮಾರ್ ಅತ್ಯುತ್ತಮ ಆಯ್ಕೆ: ಸಚಿವ ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 16:13 IST
Last Updated 17 ಫೆಬ್ರುವರಿ 2024, 16:13 IST
ಎಚ್‌.ಸಿ. ಮಹದೇವಪ್ಪ
ಎಚ್‌.ಸಿ. ಮಹದೇವಪ್ಪ   

ಬೆಂಗಳೂರು: ‘ಲೋಕಸಭಾ ಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮರ್ಥ ಅಭ್ಯರ್ಥಿಗಳು. ಅದರಲ್ಲೂ ಶಿವಕುಮಾರ್‌ ಅತ್ಯುತ್ತಮ ಆಯ್ಕೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

ವಿಧಾನಸೌಧದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುರಿತು ಪತ್ರಕರ್ತರು ಪ್ರಶ್ನಿಸಿದರು.

‘ಇಲ್ಲೇ ಮಹದೇವಪ್ಪ ಇದ್ದಾರಲ್ಲಾ, ಅವರನ್ನೇ ಕೇಳಿ’ ಎಂದು ಹೇಳಿ ಮುಖ್ಯಮಂತ್ರಿ ನಿರ್ಗಮಿಸಿದರು.

ADVERTISEMENT

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ‘ಚಾಮರಾಜನಗರ ಕ್ಷೇತ್ರದಲ್ಲಿ ನನ್ನನ್ನು ಅಥವಾ ನನ್ನ ಮಗನನ್ನು ಅಭ್ಯರ್ಥಿಯಾಗಿ ಮಾಡಿ ಎಂದು ಸ್ಥಳೀಯ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಸ್ಪಷ್ಟವಾಗಿ ಹೇಳುತ್ತೇನೆ. ನಾನೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದರು.

‘ಪಕ್ಷದ ಹೈಕಮಾಂಡ್‌ ಈವರೆಗೆ ನನಗೆ ಸ್ಪರ್ಧೆ ಕುರಿತು ಸೂಚನೆ ನೀಡಿಲ್ಲ. ಪಕ್ಷದ ಯಾರಿಂದಲೂ ಸೂಚನೆ ಇಲ್ಲ. ನನ್ನ ಮಗ ಟಿಕೆಟ್‌ ಆಕಾಂಕ್ಷಿ. ಮಗ ಎಂಬ ಕಾರಣಕ್ಕಾಗಿ ಅಲ್ಲ, ಆತ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತ. ಮೂರು ಬಾರಿ ವಿಧಾನಸಭೆ ಚುನಾವಣೆಗೆ ಟಿಕೆಟ್‌ ತಪ್ಪಿದೆ. ಆದರೂ, ಬೇಸರಿಸಿಕೊಳ್ಳದೆ ಪಕ್ಷದ ಕೆಲಸ ಮಾಡುತ್ತಿದ್ದಾನೆ’ ಎಂದರು.

‘ಪಕ್ಷಕ್ಕಾಗಿ ಸಚಿವರೂ ತ್ಯಾಗಕ್ಕೆ ಸಿದ್ಧರಾಗಿರಬೇಕು’ ಎಂಬ ಶಿವಕುಮಾರ್‌ ಹೇಳಿಕೆ ಕುರಿತು ಪ್ರಶ್ನಿಸಿದಾಗ, ‘ಅಧ್ಯಕ್ಷರಾಗಿ ಅವರು ಹೇಳುತ್ತಾರೆ. ನಾನು ಸಾಕಷ್ಟು ತ್ಯಾಗ ಮಾಡಿದ್ದೇನೆ. ಸಿದ್ಧಾಂತಕ್ಕಾಗಿ ಹೋರಾಡುವವನು ನಾನು’ ಎಂದರು.

ಗ್ಯಾರಂಟಿ ಯೋಜನೆಗಳ ಪರವಾಗಿ ಜನರು ಇದ್ದಾರೆ. ರಾಜ್ಯದಲ್ಲಿ 20 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.