ಬೆಂಗಳೂರು: ‘ಮಹಿಷಾಸುರ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ತಿರುಚಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಫೇಸ್‌ಬುಕ್‌ನಲ್ಲಿರುವ ‘ಸೀನಾ ಹಿಂದೂಸ್ತಾನಿ’ ಪೇಜ್ ಅಡ್ಮಿನ್ ಹಾಗೂ ಇತರರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೆಪಿಸಿಸಿ ಕಾನೂನು ವಿಭಾಗದ ಸೂರ್ಯ ಮುಕುಂದರಾಜ್ ದೂರು ನೀಡಿದ್ದು, ‘ಸೀನಾ ಹಿಂದೂಸ್ತಾನಿ’ ಪೇಜ್ ನಿರ್ವಹಣೆ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಮಹಿಷಾಸುರ ಉತ್ಸವ ಆಚರಣೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಲಾಗಿತ್ತು. ಜತೆಗೆ ಮಹಿಷಾಸುರ ಪ್ರತಿಮೆಗೆ ಮುಖ್ಯಮಂತ್ರಿ ಅವರ ಚಿತ್ರವನ್ನು ಮಾರ್ಫಿಂಗ್ ಮಾಡಿ ಸೇರಿಸಲಾಗಿತ್ತು. ಈ ಮೂಲಕ ಮಹಿಷಾಸುರ ಪ್ರತಿಮೆಯನ್ನು ವಿರೂಪಗೊಳಿಸಿ, ಜನರ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆ.’
‘ದಸರಾ ಹಬ್ಬದ ಸಂದರ್ಭದಲ್ಲಿಯೇ ಈ ಅವಹೇಳನಕಾರಿ ಪೋಸ್ಟ್ ಪ್ರಕಟಿಸಲಾಗಿದೆ. ಈ ಮೂಲಕ ಸಮಾಜದ ಶಾಂತಿಗೆ ಧಕ್ಕೆ ತರಲು ಆರೋಪಿಗಳು ಯತ್ನಿಸಿದ್ದಾರೆ. ಪೇಜ್‌ನ ಅಡ್ಮಿನ್ ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಈ ಸಂಬಂಧ ಫೇಸ್‌ಬುಕ್ ಕಂಪನಿಯವರಿಗೂ ಇ–ಮೇಲ್ ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.