ADVERTISEMENT

ಸಿ.ಎಂ ಗಾದಿ: ನಿಲ್ಲದ ವಾಕ್ಸಮರ

ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆಗೆ ಪರ–ವಿರೋಧ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 4:16 IST
Last Updated 29 ಜೂನ್ 2024, 4:16 IST
ಬೈರತಿ ಸುರೇಶ್‌
ಬೈರತಿ ಸುರೇಶ್‌   

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಮತ್ತು ಜಾತಿವಾರು ಉಪ ಮುಖ್ಯಮಂತ್ರಿಗಳನ್ನು ಮಾಡಬೇಕೆಂಬ ಚರ್ಚೆ ಕಾಂಗ್ರೆಸ್‌ನಲ್ಲಿ ಮತ್ತಷ್ಟು ಜೋರಾಗಿದೆ. ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ಬೇಡಿಕೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದರೆ, ಹಲವರು ಕಟುವಾಗಿ ಟೀಕಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕೆಂಬ ಸ್ವಾಮೀಜಿಯ ಬೇಡಿಕೆಯನ್ನು ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಚ್.ಸಿ. ಬಾಲಕೃಷ್ಣ ಸಮರ್ಥಿಸಿಕೊಂಡಿದ್ದಾರೆ. ಆದರೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ಸೇರಿದಂತೆ ಕೆಲವರು ಸ್ವಾಮೀಜಿ ಹೇಳಿಕೆಯನ್ನು ವಿರೋಧಿಸಿದ್ದಾರೆ.

‘ಹುಳಿ ಹಿಂಡುವುದು ಬೇಡ’
‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರಬುದ್ಧರಿದ್ದಾರೆ. ಅವರಿಬ್ಬರ ಮಧ್ಯೆ ಹುಳಿ ಹಿಂಡುವ ಕೆಲಸ ಮಾಡುವುದು ಬೇಡ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು. ‘ಸಿದ್ದರಾಮಯ್ಯ ಅವರು ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಿ’ ಎಂಬ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ಕುರಿತು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು ‘ಸ್ವಾಮೀಜಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅದು ಅವರ ಅಭಿಪ್ರಾಯ. ನಮ್ಮಲ್ಲಿ ಶಾಸಕರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ’ ಎಂದರು. ‘ನಮ್ಮದು ಹೈಕಮಾಂಡ್‌ ಇರುವ ಪಕ್ಷ. ಎಲ್ಲವನ್ನೂ ಹೈಕಮಾಂಡ್‌ ನಿರ್ಧರಿಸುತ್ತದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ರಾಹುಲ್‌ ಗಾಂಧಿ ಇದ್ದಾರೆ. ಅವರು ತೀರ್ಮಾನ ಮಾಡುತ್ತಾರೆ’ ಎಂದು ಹೇಳಿದರು. ‘ಆ ಸ್ವಾಮೀಜಿಯವರಿಗೆ ಕಳೆದ ಬಾರಿ ನಾನು ಒಂದು ಕಾರ್ಯಕ್ರಮ ಆಯೋಜಿಸಿದ್ದೆ. ಸದ್ಯಕ್ಕೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ನಾನೂ ಸೇರಿದಂತೆ ಯಾರೊಬ್ಬರೂ ಭಿನ್ನಾಭಿಪ್ರಾಯ ಸೃಷ್ಟಿಸುವುದು ಬೇಡ’ ಎಂದು ಸುರೇಶ ಹೇಳಿದರು. ‘ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆಗ್ರಹದ ಕುರಿತು ಕೇಳಿದಾಗ ‘ರಾಜೀನಾಮೆ ಕೇಳಲು ಅವರು ಯಾರು? ಅವರಿಗೆ ಆ ನೈತಿಕತೆ ಇಲ್ಲ’ ಎಂದರು.
ಎಚ್‌.ಸಿ. ಬಾಲಕೃಷ್ಣ
‘ಸ್ವಾಮೀಜಿ ಹೇಳಿಕೆಯಲ್ಲಿ ತಪ್ಪಿಲ್ಲ’
‘ಡಿ.ಕೆ. ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂಬ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರ ಹೇಳಿಕೆಯಲ್ಲಿ ತಪ್ಪಿಲ್ಲ. ಸಮುದಾಯದ ಅಭಿಲಾಶೆಯನ್ನು ಅವರು ವ್ಯಕ್ತಪಡಿಸಿದ್ದಾರೆ’ ಎಂದು ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಚ್‌.ಸಿ. ಬಾಲಕೃಷ್ಣ ಹೇಳಿದರು. ಈ ಕುರಿತು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು ‘ತಮ್ಮ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿ ಆಗಲಿ ಎಂಬುದು ಎಲ್ಲ ಸಮುದಾಯಗಳ ಸ್ವಾಮೀಜಿಗಳಿಗೂ ಇರುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಅವರ ಸಮುದಾಯದ ಸ್ವಾಮೀಜಿ ಹಿಂದೆ ಹೇಳಿದ್ದರು. ವೀರಶೈವ ಸ್ವಾಮೀಜಿಗಳೂ ಅವರ ಸಮುದಾಯದ ನಾಯಕರ ಪರ ಮಾತನಾಡಿದ್ದರು. ಅದೇ ರೀತಿ ನಮ್ಮ ಸ್ವಾಮೀಜಿಯೂ ಮಾತನಾಡಿದ್ದಾರೆ’ ಎಂದರು. ‘ಮುಖ್ಯಮಂತ್ರಿಯವರ ಎದುರಿನಲ್ಲೇ ಸ್ವಾಮೀಜಿ ಬೇಡಿಕೆ ಮಂಡಿಸಿದ್ದು ತಪ್ಪು ಎಂಬ ವಾದ ಒಪ್ಪಲಾಗದು. ಹೀಗೆಯೇ ಮಾತನಾಡಬೇಕು ಎಂದು ಸ್ವಾಮೀಜಿಗೆ ಕಡಿವಾಣ ಹಾಕಲು ಸಾಧ್ಯವೇ? ಅವರು ಹೇಳಿದ ತಕ್ಷಣ ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡುತ್ತಾರಾ’ ಎಂದು ಕೇಳಿದರು. ‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದರಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಇಬ್ಬರ ಪಾತ್ರವೂ ಇದೆ. ಸಿದ್ದರಾಮಯ್ಯ ಅವರ ನಂತರ ಶಿವಕುಮಾರ್‌ ಅವರಿಗೆ ಅವಕಾಶ ಮಾಡಿಕೊಡಿ ಎಂಬುದು ಸ್ವಾಮೀಜಿಯವರ ಆಗ್ರಹ. ಅದು ತಪ್ಪು ಹೇಗಾಗುತ್ತದೆ’ ಎಂದರು. ‘ಅನೇಕ ಜನ ಹಿರಿಯ ಶಾಸಕರು ಹೇಗೆ ಮಾತನಾಡುತ್ತಾರೆ ಎಂಬುದು ಗೊತ್ತಿದೆ. ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗಬಾರದೆಂದಿದ್ದರೆ ಹೈಕಮಾಂಡ್‌ ಈ ಚರ್ಚೆಗೆ ಕಡಿವಾಣ ಹಾಕಲಿ. ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಯಲಿ’ ಎಂದು ಹೇಳಿದರು. ‘ಸ್ವಾಮೀಜಿ ನನಗೆ ಮಠ ಬಿಟ್ಟುಕೊಡಲಿ’ ಎಂಬ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿಕೆ ಬಗ್ಗೆ ಕೇಳಿದಾಗ ‘ಅವರು ನಮ್ಮ ಸಮುದಾಯದ ಸ್ವಾಮೀಜಿ ಆಗುವುದಾದರೆ ಗೌರವದಿಂದ ಸ್ವೀಕರಿಸುತ್ತೇವೆ. ಸ್ವಾಮೀಜಿಯವರ ಮನವೊಲಿಸಿ ಮಠ ಬಿಡಿಸಿಕೊಡುತ್ತೇವೆ’ ಎಂದರು.
ಎನ್‌.ಚಲುವರಾಯಸ್ವಾಮಿ
‘ಬಹಿರಂಗವಾಗಿ ಹೇಳುವ ಅಗತ್ಯವಿರಲಿಲ್ಲ’
ಬೆಂಗಳೂರು: ‘ಮುಖ್ಯಮಂತ್ರಿ ಬದಲಾವಣೆ ಕುರಿತು ಸ್ವಾಮೀಜಿಯವರು ಬಹಿರಂಗವಾಗಿ ಹೇಳಿಕೆ ನೀಡುವ ಅಗತ್ಯವಿರಲಿಲ್ಲ’ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು. ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು ‘ಸ್ವಾಮೀಜಿ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸಬಾರದಿತ್ತು ಎಂಬ ಅಭಿಪ್ರಾಯವಿದೆ. ಆದರೆ ಅವರಿಗೆ ಹೀಗೆಯೇ ಮಾತನಾಡಬೇಕು ಎಂದು ನಾವು ಹೇಳಲಾಗದು’ ಎಂದರು. ‘ಲಿಂಗಾಯತರು ಮುಖ್ಯಮಂತ್ರಿ ಆಗಲಿ’ ಎಂಬ ಶಿವಾಚಾರ್ಯ ಸ್ವಾಮೀಜಿಯವರ ಹೇಳಿಕೆ ಬಗ್ಗೆ ಕೇಳಿದಾಗ ‘ರಾಜ್ಯದ ಗ್ರಹಚಾರ ಸರಿ ಇಲ್ಲ ಅನಿಸುತ್ತದೆ. ಈ ರೀತಿಯ ಚರ್ಚೆ ಹಿಂದೆ ವಿರೋಧ ಪಕ್ಷದ ಕೈವಾಡವೂ ಇರಬಹುದು’ ಎಂದರು.
ಎಚ್‌.ಎಂ. ರೇವಣ್ಣ
‘ಸ್ವಾಮೀಜಿ ಹೇಳಿಕೆ ನೀಡಿದ್ದು ಸರಿಯಲ್ಲ’
ಬೆಂಗಳೂರು: ‘ಪಕ್ಷದ ವರಿಷ್ಠರು ನಿರ್ಧಾರ ಮಾಡಬೇಕಾದಂತಹ ವಿಚಾರದಲ್ಲಿ ಸ್ವಾಮೀಜಿಯವರು ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ಹೇಳಿದರು. ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು ‘ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ. ಆದರೆ ಪಕ್ಷದ ವಿಚಾರವನ್ನು ಸ್ವಾಮೀಜಿ ಮಾತನಾಡುವುದು ಸರಿಯಲ್ಲ. ಮುಂದೆ ಇನ್ನೊಂದು ಸಮುದಾಯದ ಸ್ವಾಮೀಜಿಗಳು ಮುಖ್ಯಮಂತ್ರಿ ಸ್ಥಾನದ ಕುರಿತು ಮಾತನಾಡಬಹುದು. ಇದರಿಂದ ಪಕ್ಷ ಮತ್ತು ಸರ್ಕಾರದಲ್ಲಿ ಗೊಂದಲ ಸೃಷ್ಟಿಯಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT