ಬೆಂಗಳೂರು: ‘ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಇರಬಹುದು. ಅದನ್ನ ತಪ್ಪು ಎಂದು ಹೇಳುವುದಿಲ್ಲ. ಆದರೆ, ಮುಖ್ಯಮಂತ್ರಿ ಕುರ್ಚಿಯೇ ಖಾಲಿ ಇಲ್ಲವಲ್ಲ. ಯಾವ ಕಾರಣಕ್ಕೂ ಮುಖ್ಯಮಂತ್ರಿ ಖುರ್ಚಿ ಖಾಲಿಯಾಗುವುದೇ ಇಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಈಗ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಹೀಗಿರುವಾಗ ಯಾಕೆ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಉದ್ಭವಾಗುತ್ತದೆ’ ಎಂದರು.
‘ಸಿದ್ದರಾಮಯ್ಯಗೆ ಮೊದಲಿದ್ದ ಸ್ವಾತಂತ್ರ್ಯ ಈಗ ಇದ್ದಂತಿಲ್ಲ, 2013 ಸುವರ್ಣಯುಗವಾಗಿತ್ತು ಎಂಬ ಮಾಜಿ ಸಚಿವ ಆಂಜನೇಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಅವರಿಗೆ ಯಾಕೆ ಸ್ವಾತಂತ್ರ್ಯ ಇಲ್ಲ. ಅವರು ಯಾವಾಗಲೂ ಸ್ವಾತಂತ್ರ್ಯ ಇರುವ ವ್ಯಕ್ತಿ. ಅವರು ಎಂದೂ ಸ್ವಾತಂತ್ರ್ಯ ಕಳೆದುಕೊಂಡು ಆಡಳಿತ ನಡೆಸುವುದಿಲ್ಲ. ಅವರ ಕೈ ಕಟ್ಟಿ ಹಾಕಿದಿದ್ದರೆ, ಸಹಿ ಯಾಕೆ ಹಾಕುತ್ತಾರೆ’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್‌ನ ಎಲ್ಲಾ ಅವಧಿಯೂ ಸುವರ್ಣಯುಗವೇ. ಬಡವರು, ದೀನ ದಲಿತರು, ಜನಸಾಮಾನ್ಯರಿಗೆ ಸುವರ್ಣಯುಗವೇ. ಅದರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಹೆಚ್ಚೆಚ್ಚು ಒಳ್ಳೆಯ ಕಾರ್ಯಕ್ರಮಗಳು ಇರುತ್ತವೆ. ಆದರೆ, ಆಂಜನೇಯ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ’ ಎಂದರು.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಭಾನುವಾರ ಪ್ರಕಟವಾಗಲಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಛತ್ತೀಸಗಢ, ತೆಲಂಗಾಣ, ಮಧ್ಯಪ್ರದೇಶದಲ್ಲಿ ನಮ್ಮ ಪಕ್ಷ ಗೆಲುವು ಸಾಧಿಸಲಿದೆ. ಇನ್ನೆರಡು ರಾಜ್ಯಗಳಲ್ಲಿ 50–50 ಅವಕಾಶ ಇದೆ’ ಎಂದರು.
‘ಇದು ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಲ್ಲ. ಆದರೂ, ಬಿಜೆಪಿ ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಲಿದೆ. ದುರ್ಬಲರು, ರೈತರ ಪರ ಬಿಜೆಪಿ ಇಲ್ಲ ಎಂಬುದು ಸಾಬೀತಾಗಲಿದೆ. ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವುದು, ಭಾವನೆಗಳ ಮೇಲೆ ರಾಜಕೀಯ ಮಾಡುವುದನ್ನ ಜನ ನೋಡಿದ್ದಾರೆ’ ಎಂದರು.
‘ಸರ್ಕಾರ ಪತನವಾಗಲಿದೆ’ ಎಂಬ ಯಡಿಯೂರಪ್ಪ ಹೇಳಿಕೆಗೆ, ‘ಜನರು ನಮಗೆ ಬಹುಮತ ಕೊಟ್ಟಿದ್ದಾರೆ. 135 ಸ್ಥಾನಗಳನ್ನು ಜನರು ನೀಡಿದ್ದಾರೆ. ಹೀಗಿರುವಾಗ ಸರ್ಕಾರ ಹೇಗೆ ಪತನವಾಗುತ್ತದೆ’ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಇನ್ಫೊಸಿಸ್ ನಾರಾಯಣ ಮೂರ್ತಿ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಮಹದೇವಪ್ಪ, ‘ಅವರಿಗೆ ಬಡವರ ಬಗ್ಗೆ ಏನು ಕಾಳಜಿ ಇದೆ. ಉಚಿತ ಅಕ್ಕಿ, ಉಚಿತ ಪ್ರಯಾಣ ಕೊಟ್ಟರೆ ಏನಾಗಲಿದೆ. ಅಷ್ಟಕ್ಕೂ ಉದ್ಯಮಿಗಳ ಸಾವಿರಾರು ಕೋಟಿ ಮನ್ನಾ ಮಾಡಲಾಗಿದೆ. ಅದನ್ನ ಯಾಕೆ ಇವರು ಪ್ರಶ್ನೆ ಮಾಡುತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.