ADVERTISEMENT

ಪಿ.ಎಂ ಕುಸುಮ್: ತ್ವರಿತ ಜಮೀನು ಹಸ್ತಾಂತರಕ್ಕೆ ಸೂಚನೆ ನೀಡಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 15:56 IST
Last Updated 3 ಜನವರಿ 2024, 15:56 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್‌ ಒದಗಿಸಲು ಪ್ರಧಾನಮಂತ್ರಿ ಕುಸುಮ್‌  (ಪಿ.ಎಂ ಕುಸುಮ್‌) ಯೋಜನೆಯಡಿ 400 ಸೌರ ವಿದ್ಯುತ್‌ ಘಟಕಗಳ ನಿರ್ಮಾಣಕ್ಕೆ ಅಗತ್ಯವಿರುವ ಜಮೀನುಗಳನ್ನು ತ್ವರಿತವಾಗಿ ಹಸ್ತಾಂತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪಿ.ಎಂ ಕುಸುಮ್‌ ಯೋಜನೆಯಡಿ 400 ವಿದ್ಯುತ್‌ ಉಪ ಕೇಂದ್ರಗಳ ಬಳಿ ಸೌರ ವಿದ್ಯುತ್‌ ಘಟಕಗಳನ್ನು ನಿರ್ಮಿಸಿ, ಸಂಪರ್ಕ ಕಲ್ಪಿಸುವ ಪ್ರಸ್ತಾವವಿದೆ. ಈ ಯೋಜನೆಗೆ ಜಮೀನು ಒದಗಿಸುವ ಸಂಬಂಧ ಮುಖ್ಯಮಂತ್ರಿಯವರು ಕಂದಾಯ ಮತ್ತು ಇಂಧನ ಇಲಾಖೆ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದರು.

ADVERTISEMENT

‘400 ಸೌರ ವಿದ್ಯುತ್‌ ಘಟಕಗಳ ನಿರ್ಮಾಣಕ್ಕೆ 3,000 ಎಕರೆ ಜಮೀನಿನ ಅಗತ್ಯವಿದೆ. ತ್ವರಿತವಾಗಿ ಜಮೀನು ಹಸ್ತಾಂತರಿಸಿದರೆ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಬಹುದು. ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ರಾತ್ರಿಯ ಬದಲಿಗೆ ಹಗಲಿನಲ್ಲೇ ವಿದ್ಯುತ್‌ ಪೂರೈಸಬಹುದು’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಇಂಧನ ಇಲಾಖೆಯ ಅಧಿಕಾರಿಗಳು ಸ್ಥಳೀಯ ತಹಶೀಲ್ದಾರರೊಂದಿಗೆ ಸಮನ್ವಯದಲ್ಲಿದ್ದು ಅಗತ್ಯ ಜಮೀನು ಗುರುತಿಸಬೇಕು. ಪ್ರಸ್ತಾವ ಸಲ್ಲಿಸಿ ತ್ವರಿತವಾಗಿ ಜಮೀನು ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು. ಕಂದಾಯ ಇಲಾಖೆಯು ಇಂಧನ ಇಲಾಖೆಗೆ ಗುತ್ತಿಗೆ ಆಧಾರದಲ್ಲಿ ಜಮೀನು ಹಸ್ತಾಂತರಿಸಬೇಕು. ಖಾಸಗಿಯವರಿಗೆ ಜಮೀನು ನೀಡುವಂತಿಲ್ಲ ಎಂಬ ಷರತ್ತು ವಿಧಿಸಬೇಕು’ ಎಂದು ಸೂಚಿಸಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಎಲ್ಲ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಈ ಕುರಿತು ಸೂಚನೆ ನೀಡಲಾಗುವುದು. ಸೌರ ವಿದ್ಯುತ್‌ ಘಟಕಗಳ ನಿರ್ಮಾಣಕ್ಕೆ ಜಮೀನು ಒದಗಿಸಲು ಆದ್ಯತೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಸೂಚಿಸಲಾಗುವುದು ಎಂದರು.

ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಕೆ.ವಿ. ತ್ರಿಲೋಕಚಂದ್ರ ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.