ಬೆಂಗಳೂರು: ಶೇಂದಿ, ಸಾರಾಯಿ ನಿಷೇಧದ ಬಳಿಕ ಪರ್ಯಾಯ ಪರಿಹಾರ ಕಾಣದೇ ಹಿಂದುಳಿದಿರುವ ಈಡಿಗ ಮತ್ತು 25 ಉಪ ಪಂಗಡಗಳು ಭಾನುವಾರ ಅರಮನೆ ಮೈದಾನದಲ್ಲಿ ಶಕ್ತಿ ಪ್ರದರ್ಶಿಸಿದವು. ರಾಜ್ಯದಲ್ಲಿ 50 ಲಕ್ಷ ಜನಸಂಖ್ಯೆ ಇರುವ ಈ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದವು.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಬೃಹತ್ ಜಾಗೃತಿ ಸಮಾವೇಶದಲ್ಲಿ ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಿದ್ದರು. ಆರ್ಯ ಈಡಿಗ ಸಂಘದ ಅಧ್ಯಕ್ಷ ಎಂ. ತಿಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಟಿ. ಮೋಹನ್‌ದಾಸ್, ಸಮುದಾಯದ ಮುಖಂಡರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.
ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಅಭಿವೃದ್ಧಿ ನಿಗಮಕ್ಕೆ ₹ 500 ಕೋಟಿ ಅನುದಾನ ನೀಡಬೇಕು. ಬೆಂಗಳೂರಿನ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಸಮುದಾಯ ಭವನ ನಿರ್ಮಿಸಲು ₹ 10 ಕೋಟಿ ಅನುದಾನ ಒದಗಿಸಬೇಕು. ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಿದ್ಯಾಸಂಸ್ಥೆ, ವಿದ್ಯಾರ್ಥಿನಿಲಯ ಆರಂಭಿಸಲು ನಿವೇಶನ ಒದಗಿಸಬೇಕು. ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ತರಬೇತಿ ಕೇಂದ್ರ, ನಾರಾಯಣ ಗುರು ಮಠ, ಗ್ರಂಥಾಲಯ, ಸಂಶೋಧನಾ ಕೇಂದ್ರಗಳನ್ನು ನಿರ್ಮಿಸಲು ಸೋಲೂರಿನಲ್ಲಿ 20 ಎಕರೆ ಗೋಮಾಳ ಜಮೀನು ಮಂಜೂರು ಮಾಡಬೇಕು. ಶರಾವತಿ ಮುಳುಗಡೆ ಸಂತ್ರಸ್ತ ರೈತರಿಗೆ ಮತ್ತು ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಸಿಗಂದೂರು ದೇವಸ್ಥಾನದ 15 ಎಕರೆ ಜಾಗದ ಹಕ್ಕುಪತ್ರ ನೀಡಬೇಕು. ಕಾಂತರಾಜ ವರದಿಯನ್ನು ಜಾರಿಗೊಳಿಸಬೇಕು. ಎಸ್‌ಎನ್‌ಡಿಪಿ ಯೋಗಂ ಬೆಂಗಳೂರು ಯೂನಿಯನ್‌ನ ಜಮೀನಿನಲ್ಲಿರುವ ಶಾಲೆಯ ಅಭಿವೃದ್ಧಿಗೆ ₹ 10 ಕೋಟಿ ನೀಡಬೇಕು. ಬನ್ನೇರುಘಟ್ಟ ರಸ್ತೆಯ ಮೆಟ್ರೊ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕು. ಶರಣ ಹೆಂಡದ ಮಾರಯ್ಯ ತಪಸ್ಸು ಮಾಡಿದ ಗವಿಯನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಲ್ಲಿ ಸೇರಿಸಬೇಕು. ಸಮಾಜದವರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸೋಲೂರು ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರು ರೇಣುಕಾನಂದ ಸ್ವಾಮೀಜಿ, ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತ, ನಿಪ್ಪಾಣಿ ಅರುಣಾನಂದ ಸ್ವಾಮೀಜಿ, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ, ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ತಿಲಕ್ ಕುಮಾರ್, ಮಾಜಿ ಶಾಸಕ ವಸಂತ ಬಂಗೇರ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಎಚ್.ಆರ್. ಗವಿಯಪ್ಪ, ಕೆ. ಹರೀಶ್ ಕುಮಾರ್, ಮುಖಂಡರಾದ ವಿನಯಕುಮಾರ್ ಸೊರಕೆ, ಎಚ್. ಹಾಲಪ್ಪ ಹರತಾಳು, ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಈಡಿಗರ ಸಂಘದ ಪದಾಧಿಕಾರಿಗಳು, ವಿವಿಧ ಪಂಗಡಗಳ ಮುಖಂಡರು ಸಮಾವೇಶಕ್ಕೆ ಸಾಕ್ಷಿಯಾದರು.
ಈಡಿಗರ ಸಂಘವು ಹಲವು ಬೇಡಿಕೆಗಳನ್ನು ಇಟ್ಟಿದೆ. ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವುದರಿಂದ ಈಗ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ. ಅಧಿವೇಶನ ಮುಕ್ತಾಯವಾದ ಬಳಿಕ ಸಮುದಾಯದ ಮುಖಂಡರ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಎಲ್ಲರಿಗೂ ಶಿಕ್ಷಣ ದೊರೆಯುತ್ತಿದ್ದರೂ ವೈಚಾರಿಕವಾದ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಹಿಂದೆ ಶೂದ್ರರಿಗೆ ದಲಿತರಿಗೆ ಶಿಕ್ಷಣವನ್ನು ನಿರಾಕರಿಸಲಾಗಿತ್ತು. ಬ್ರಿಟಿಷರು ಬಂದ ಬಳಿಕ ಅವರಿಗೆ ಕಾರಕೂನರು ಅಗತ್ಯ ಇದ್ದಿದ್ದರಿಂದ ಶೂದ್ರರಿಗೆ ಶಿಕ್ಷಣ ನೀಡಲು ಆರಂಭಿಸಿದರು. ಈಗ ಗುಣಮಟ್ಟದ ಪಠ್ಯವನ್ನು ನೀಡಬೇಕಿದೆ ಎಂದು ತಿಳಿಸಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶಿವರಾಜ್‌ಕುಮಾರ್ ತಯಾರಾಗಬೇಕು. ನಟರಾಗಲು ಎಲ್ಲರಿಗೂ ಅವಕಾಶಗಳು ಇರುತ್ತವೆ. ಎಲ್ಲರೂ ಸಂಸದರಾಗಲು ಸಾಧ್ಯವಿಲ್ಲ. ಶಿವರಾಜ್‌ಕುಮಾರ್ ಅವರ ಮನೆ ಬಾಗಿಲಿಗೆ ಅವಕಾಶ ಬಂದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದರು. ‘ನನಗೆ ನಟನೆ ಬಳುವಳಿಯಾಗಿ ಬಂದಿದೆ ರಾಜಕೀಯವಲ್ಲ. ನನ್ನ ಪತ್ನಿ ಗೀತಾ ಎಸ್. ಬಂಗಾರಪ್ಪ ಅವರ ಮಗಳು. ರಾಜಕೀಯ ಕುಟುಂಬದದಿಂದ ಬಂದಿರುವ ಅವರಿಗೆ ರಾಜಕೀಯದ ಬಗ್ಗೆ ಆಸಕ್ತಿ ಇದೆ. ರಾಜಕೀಯವನ್ನು ಅವರಿಗೆ ಬಿಟ್ಟಿದ್ದೇನೆ’ ಎಂದು ನಟ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದರು.
ವಿಧಾನ ಪರಿಷತ್ ಸದಸ್ಯ ಸಮಾಜದ ಮುಖಂಡ ಬಿ.ಕೆ. ಹರಿಪ್ರಸಾದ್ ಅವರು ಸಮಾವೇಶಕ್ಕೆ ಗೈರು ಹಾಜರಾಗಿದ್ದರು. ಅಲ್ಲದೇ ವಿ. ಸುನೀಲ್ ಕುಮಾರ್ ಕೋಟ ಶ್ರೀನಿವಾಸ ಪೂಜಾರಿ ಉಮಾನಾಥ ಕೋಟ್ಯನ್ ಸಹಿತ ಬಿಜೆಪಿಯಲ್ಲಿರುವ ಸಮುದಾಯದ ಬಹುತೇಕ ಶಾಸಕರು ಮುಖಂಡರು ಗೈರಾಗಿದ್ದರು.
ನಾರಾಯಣ ಗುರುಗಳ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸಲು ಪಠ್ಯ ಪುಸ್ತಕದಲ್ಲಿ ಗುರುಗಳ ಪಠ್ಯ ಅಳವಡಿಸುವುದು ಅಗತ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಶೇಂದಿ ಸಾರಾಯಿ ನಿಷೇಧ ಮಾಡಿದ ಮೇಲೆ ಕರಾವಳಿ ಮಲೆನಾಡಿನಲ್ಲಿರುವ ಈಡಿಗ–ಬಿಲ್ಲವ ಸಮುದಾಯದ ಜನರು ಹೇಗೋ ಜೀವನ ನಡೆಸುತ್ತಿದ್ದಾರೆ. ಅವರಲ್ಲಿ ಸ್ವಲ್ಪ ಭೂಮಿ ಇದ್ದಿದ್ದರಿಂದ ಇದು ಸಾಧ್ಯವಾಗಿದೆ. ಆದರೆ ಕಲ್ಯಾಣ ಕರ್ನಾಟಕದಲ್ಲಿ ಈ ಸಮುದಾಯದ ಜನರು ಬೀದಿಗೆ ಬಿದ್ದಿದ್ದಾರೆ ಎಂದು ತಿಳಿಸಿದರು. ಕರ್ನಾಟಕಕ್ಕೆ ಬೆಳಕು ನೀಡಲು ಭೂಮಿ ಕಳೆದುಕೊಂಡ ಶರಾವತಿ ಸಂತ್ರಸ್ತರು ಕತ್ತಲೆಯಲ್ಲಿದ್ದಾರೆ. ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.