ADVERTISEMENT

ಪೊಲೀಸರೇ ನಿಮಗೆ ಬಂದೂಕು ಕೊಟ್ಟಿರುವುದೇಕೆ?: ಮುಖ್ಯಮಂತ್ರಿ ಸಿದ್ದರಾಮಯ್ಯ

ಅಧಿಕಾರಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 15:30 IST
Last Updated 6 ಜುಲೈ 2024, 15:30 IST
ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಅವರು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಗೃಹ ಸಚಿವ ಜಿ. ಪರಮೇಶ್ವರ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ 
ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಅವರು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಗೃಹ ಸಚಿವ ಜಿ. ಪರಮೇಶ್ವರ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ     

ಬೆಂಗಳೂರು: ‘ರೌಡಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಡ್ರಗ್ಸ್‌, ಬೆಟ್ಟಿಂಗ್, ಇಸ್ಪೀಟ್ ದಂಧೆ ತಡೆಯಲು ಏಕೆ ಆಗುತ್ತಿಲ್ಲ? ನಿಮಗೆ ಬಂದೂಕು ಕೊಟ್ಟಿರುವುದೇಕೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳನ್ನು ನಿಷ್ಠರುವಾಗಿಯೇ ಪ್ರಶ್ನಿಸಿದರು. 

ನಗರದಲ್ಲಿ ಶನಿವಾರ ನಡೆದ ಪೊಲೀಸ್ ಅಧಿಕಾರಿಗಳ ಸಮಾವೇಶ ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ರಿಯಲ್ ಎಸ್ಟೇಟ್ ನಡೆಸುವವರ ಜತೆಗೆ ಪೊಲೀಸರು ಶಾಮೀಲಾಗಿರುವುದು ಗೊತ್ತಾದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಐಜಿ, ನಗರ ಪೊಲೀಸ್‌ ಕಮಿಷನರ್‌ಗಳು, ಎಸ್‌ಪಿಗಳು ಪ್ರತಿದಿನ ಒಂದು ಪೊಲೀಸ್‌ ಠಾಣೆಗೆ ಭೇಟಿ ನೀಡಬೇಕು. ಸ್ಥಳೀಯರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಲ್ಪಿಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

‘ಮಾದಕ ವಸ್ತು, ಕಳ್ಳತನ, ದರೋಡೆ, ಜೂಜು, ಮಟ್ಕಾ ದಂಧೆಗಳ ಮಾಹಿತಿ ಸ್ಥಳೀಯ ಪೊಲೀಸ್‌ ಠಾಣೆಗಳಿಗೆ ಇರುತ್ತದೆ. ಕೆಲವೆಡೆ ದಂಧೆಕೋರರ ಜತೆಗೆ ಪೊಲೀಸರು ಶಾಮೀಲಾಗಿರುತ್ತಾರೆ. ಪೊಲೀಸರು ಮನಸ್ಸು ಮಾಡಿದರೆ ಬಹುತೇಕ ಅಪರಾಧಗಳನ್ನು ನಿಯಂತ್ರಿಸಬಹುದು. ಆದ್ದರಿಂದ, ಹಿರಿಯ ಪೊಲೀಸ್ ಅಧಿಕಾರಿಗಳು ತಿಂಗಳಲ್ಲಿ ಮೂರು ಠಾಣೆಗಳಿಗೆ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಬೇಕು’ ಎಂದು ಸೂಚಿಸಿದರು.

ಮೈಸೂರು, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಡ್ರಗ್ಸ್‌ ದಂಧೆ ಹೆಚ್ಚುತ್ತಿದೆ. ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಈ ವ್ಯವಹಾರದಲ್ಲಿ ಭಾಗಿಯಾಗಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು. 

‘ಕೃತಕ ಬುದ್ದಿಮತ್ತೆ ತಂತ್ರಜ್ಞಾನ (ಎ.ಐ) ಬಳಸಿಕೊಂಡು ಸ್ವಯಂ ಪ್ರೇರಿತ ದೂರುಗಳನ್ನು ಹೆಚ್ಚು ದಾಖಲಿಸಿಕೊಳ್ಳಬೇಕು. ಕೆಲವು ಪೊಲೀಸರಿಗೆ ಇ-ಬೀಟ್ ವ್ಯವಸ್ಥೆ ಜಾರಿಯಲ್ಲಿರುವುದೇ ಗೊತ್ತಿಲ್ಲ? ಜನಸಂದಣಿ ಪ್ರದೇಶಗಳಲ್ಲಿ ಇ–ಬೀಟ್‌ ಹೆಚ್ಚಿಸಬೇಕು. ಪೊಲೀಸರ ಹಾಜರಿ ಸಮವಸ್ತ್ರದಲ್ಲಿಯೇ ಇರಬೇಕು. ಆಗ ಅಪರಾಧ ಕೃತ್ಯ ನಿಯಂತ್ರಿಸಲು ಸಾಧ್ಯವಾಗಲಿದೆ’ ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಭಾಗವಹಿಸಿದ್ದರು.

ಒಂದು ವರ್ಷದಲ್ಲಿ ರಾಜ್ಯದಲ್ಲಿ ಕೋಮುಗಲಭೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದ ಗೃಹ ಸಚಿವರಿಗೆ ಹಾಗೂ ಕರ್ನಾಟಕ ಪೊಲೀಸರಿಗೆ ಅಭಿನಂದನೆಗಳು.
ಸಿದ್ದರಾಮಯ್ಯ ಮುಖ್ಯಮಂತ್ರಿ
‘ಸಮನ್ವಯದ ಕೊರತೆ’
‘ಗುಪ್ತಚರ ವಿಭಾಗ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸರ ನಡುವೆ ಸಮನ್ವಯದ ಕೊರತೆಯಿದೆ. ಗುಪ್ತಚರ ವಿಭಾಗದ ನಿರ್ಲಕ್ಷ್ಯದಿಂದ ಹುಬ್ಬಳ್ಳಿಯಲ್ಲಿ ಕೊಲೆ ಕೃತ್ಯಗಳು ನಡೆದಿವೆ. ಮುಂಜಾಗ್ರತೆ ವಹಿಸಿದ್ದರೆ ಈ ಪ್ರಕರಣಗಳನ್ನು ತಪ್ಪಿಸಬಹುದಿತ್ತು’ ಎಂದು ಸಿದ್ದರಾಮಯ್ಯ ಹೇಳಿದರು.  

‘ನಮ್ಮ ಪೊಲೀಸರು ಸಮರ್ಥರಿದ್ದಾರೆ’:

‘ವಿರೋಧ ಪಕ್ಷದವರು ಎಲ್ಲ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸುತ್ತಾರೆ. ಆದರೆ ಅವರು ಅಧಿಕಾರದಲ್ಲಿದ್ದಾಗ ಸಿಬಿಐಗೆ ಚೋರ್ ಬಚಾವೋ ಸಂಸ್ಥೆ ಎನ್ನುತ್ತಿದ್ದರು. ಸಿಬಿಐ ಮತ್ತು ಸಿಐಡಿ ಎರಡು ತನಿಖಾ ಸಂಸ್ಥೆಗಳಲ್ಲಿ ನಮ್ಮ ಪೊಲೀಸರೇ ಇದ್ದಾರೆ. ರಾಜ್ಯ ಪೊಲೀಸರು ಕೂಡ ತನಿಖೆ ಮಾಡಲು ಸಮರ್ಥರಿದ್ದಾರೆ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

‘ನ್ಯಾಯ ನೀಡಿಕೆ: ರಾಜ್ಯ ಪೊಲೀಸರು ಪ್ರಥಮ’ 
ದೇಶದ ಪ್ರತಿಷ್ಠಿತ ಇಂಡಿಯಾ ಜಸ್ಟೀಸ್‌ ರಿಪೋರ್ಟ್‌ ನಡೆಸಿದ ಸಮೀಕ್ಷೆ ಮತ್ತು ವರದಿಯಲ್ಲಿ ಕರ್ನಾಟಕ ಪೊಲೀಸ್‌ ದೇಶದಲ್ಲಿ ನ್ಯಾಯ ನೀಡುವುದರಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ಒಟ್ಟು 10 ಅಂಕಗಳನ್ನು ಇಟ್ಟುಕೊಂಡು ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕ ಪೊಲೀಸರಿಗೆ 6.38 ಅಂಕಗಳು ದೊರೆತಿವೆ. ಇದೇ ಗುಣಮಟ್ಟವನ್ನು ಮುಂದುವರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.