ADVERTISEMENT

ವಕ್ಫ್‌ ವಿವಾದ | ರೈತರ ತಲೆ ಮೇಲೆ CM ಸಿದ್ದರಾಮಯ್ಯ ಟೋಪಿ ಹಾಕುತ್ತಾರೆ: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 10:14 IST
Last Updated 4 ನವೆಂಬರ್ 2024, 10:14 IST
<div class="paragraphs"><p>ವಕ್ಫ್‌ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಗರದ ಕೆ.ಆರ್‌.ಪುರದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು</p></div>

ವಕ್ಫ್‌ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಗರದ ಕೆ.ಆರ್‌.ಪುರದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು

   

ಬೆಂಗಳೂರು: ವಕ್ಫ್‌ ಮಂಡಳಿ ಭೂಮಿ ಕಬಳಿಸುತ್ತಿರುವುದು ರೈತರ ಪಾಲಿಗೆ ಮರಣಶಾಸನವಾಗಿದೆ. ಆದರೆ ಭೂ ಕಬಳಿಕೆಯ ಈ ಆಟ ನಡೆಯಲು ಹಿಂದೂಗಳು ಬಿಡುವುದಿಲ್ಲ. ಕೂಡಲೇ ಕಾಂಗ್ರೆಸ್‌ ಸರ್ಕಾರ ವಕ್ಫ್‌ ಕಾಯ್ದೆಯಲ್ಲಿ ಬದಲಾವಣೆ ತರಲಿ ಎಂದು ವಿಧಾನಸಭೆ ವಿರೋಧ‍ಪಕ್ಷದ ನಾಯಕ ಆರ್.ಅಶೋಕ ಆಗ್ರಹಿಸಿದರು.

ವಕ್ಫ್‌ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಗರದ ಕೆ.ಆರ್‌.ಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ADVERTISEMENT

ಜಮೀನು ಕಬಳಿಸುವ ಮೂಲಕ ಅನ್ನದಾತರ ಕಣ್ಣಲ್ಲಿ ನೀರು ಬರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇವೆಲ್ಲಕ್ಕೂ ಸಚಿವ ಜಮೀರ್‌ ಅಹಮದ್‌ ಕಾರಣ. ಹಿಂದೆ ಕೇಂದ್ರದ ಕಾಂಗ್ರೆಸ್‌ ಸರ್ಕಾರ ಮುಸ್ಲಿಮರನ್ನು ಓಲೈಸಲು ವಕ್ಫ್‌ ಬೋರ್ಡ್‌ಗೆ ಹೆಚ್ಚು ಅಧಿಕಾರ ನೀಡಿತು. ಸಿದ್ದರಾಮಯ್ಯ ಅವರೇ ಭೂಮಿ ಪಡೆಯಿರಿ ಎಂದು ಹೇಳಿದ್ದು, ಈಗ ಇದು ಬಿಜೆಪಿ ಮಾಡುವ ರಾಜಕೀಯ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರು ಈಗ ಟೋಪಿ ತೆಗೆದಿದ್ದಾರೆ. ಬಳಿಕ ಅವರೇ ರೈತರ ತಲೆ ಮೇಲೆ ಟೋಪಿ ಹಾಕುತ್ತಾರೆ. ಮುಸ್ಲಿಮರಿಗೆ ₹10 ಸಾವಿರ ಕೋಟಿ ನೀಡುತ್ತೇನೆಂದು ಹೇಳಿ ದಲಿತರ ಹಣ ಲೂಟಿ ಮಾಡಿದ್ದಾರೆ. ಕಾಂಗ್ರೆಸ್‌ಗೆ ಹಿಂದೂಗಳು ಮತ ನೀಡಿಲ್ಲವೇ? ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳೇ? ಎಂದು ಪ್ರಶ್ನಿಸಿದರು.

ಬಾಬರ್‌, ಔರಂಗಜೇಬ ಮೊದಲಾದ ಮತಾಂಧ ರಾಜರು ವಕ್ಫ್‌ ಬೋರ್ಡ್‌ಗೆ ಮಾದರಿ. ಶ್ರೀರಂಗಪಟ್ಟಣದಲ್ಲಿ ನೂರಾರು ವರ್ಷಗಳಿಂದ ಇರುವ ದೇವಸ್ಥಾನವನ್ನು ಖಬರ್‌ಸ್ಥಾನ ಎಂದು ದಾಖಲೆಯಲ್ಲಿ ಬರೆಸಿದ್ದಾರೆ. ಲವ್‌ ಜಿಹಾದ್‌ ಮಾಡಿ ಹಿಂದೂ ಹೆಣ್ಣುಮಕ್ಕಳನ್ನು ಮತಾಂತರ ಮಾಡಲಾಗಿದೆ. ಈಗ ಲ್ಯಾಂಡ್‌ ಜಿಹಾದ್‌ ಮೂಲಕ ರೈತರ ಜಮೀನು ಪರಿವರ್ತನೆ ಮಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ನ ಮಗುವಿನಂತೆ ನಿದ್ರಿಸಿ ಎಂಬ ಘೋಷಣೆಯಂತೆ, ಭಯೋತ್ಪಾದಕರು ಹಾಗೂ ಮೂಲಭೂತವಾದಿಗಳು ಕರ್ನಾಟಕದಲ್ಲಿ ಮಗುವಿನಂತೆ ಆರಾಮಾಗಿ ನಿದ್ರಿಸಬಹುದು. ಭಯೋತ್ಪಾದಕರು ಡಿ.ಕೆ.ಶಿವಕುಮಾರ್‌ ಅವರ ಸಹೋದರರಾಗಿದ್ದಾರೆ. ಭಯೋತ್ಪಾದನೆ ಮಾಡಿದವರನ್ನು ನಮ್ಮವರು ಎಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಯ್ದೆಯಲ್ಲಿ ಬದಲಾವಣೆ ತನ್ನಿ

‘ವಕ್ಫ್‌ ಬೋರ್ಡ್‌ ಈಗ ಸಾಬರ ಬೋರ್ಡ್‌ ಆಗಿದ್ದು,  ಸಿದ್ದರಾಮಯ್ಯನವರು ಬೇಕಿದ್ದರೆ ಎಲ್ಲ ಭೂಮಿಯನ್ನು ಈ ಬೋರ್ಡ್‌ಗೆ ಬರೆದುಬಿಡಬಹುದು. ಇವೆಲ್ಲ ದಾನ ಕೊಟ್ಟ ಜಮೀನು ಎಂದು ವಕ್ಫ್‌ ಮಂಡಳಿ ಹೇಳುತ್ತಿದೆ. ಮುಜರಾಯಿ ಇಲಾಖೆಗೂ ದಾನದಿಂದ ಭೂಮಿ ಬಂದಿದೆ. ಆದರೆ ಅದು ಮಾತ್ರ ಸರ್ಕಾರಿ ಆಸ್ತಿಯಾಗುತ್ತದೆ. ಆದರೆ ವಕ್ಫ್‌ ಬೋರ್ಡ್‌ಗೆ ದಾನದಿಂದ ಬರುವ ಭೂಮಿ ಮಾತ್ರ ಸರ್ಕಾರಿ ಆಸ್ತಿಯಾಗುವುದಿಲ್ಲ. ಹೀಗೆಯೇ ಕಾಂಗ್ರೆಸ್‌ ರಾಜ್ಯವನ್ನು ಹಾಳು ಮಾಡಿದರೆ ಹಿಂದೂಗಳು ಈ ಆಟ ನಡೆಯಲು ಬಿಡುವುದಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಕಾಯ್ದೆಯಲ್ಲಿ ಬದಲಾವಣೆ ಮಾಡಲಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಯ ಮಾತನ್ನು ನಂಬಲ್ಲ

ಸಿದ್ದರಾಮಯ್ಯನವರ ಮಾತನ್ನು ಯಾರೂ ನಂಬುವುದಿಲ್ಲ. ಅವರು ಯಾವಾಗ ಬೇಕಾದರೂ ಮಾತು ಬದಲಿಸುತ್ತಾರೆ. ರೈತರಿಗೆ ಸಂಪೂರ್ಣವಾಗಿ ಜಮೀನಿನ ದಾಖಲೆಗಳು ಸಿಕ್ಕಿ, ಅವರ ಹೆಸರಿಗೆ ಜಮೀನು ಸಂಪೂರ್ಣವಾಗಿ ನೋಂದಣಿಯಾಗುವವರೆಗೂ ಬಿಜೆಪಿ ಹೋರಾಟ ಮಾಡಲಿದೆ. ವಕ್ಫ್‌ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಗೆ ಈ ಕುರಿತು ಪತ್ರ ಬರೆದಿದ್ದೇನೆ. ಈ ಸಮಿತಿ ಕರ್ನಾಟಕಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ವಕ್ಫ್‌ ಬೋರ್ಡ್‌ ಆಸ್ತಿ ಕಬಳಿಕೆ ಒಂದು ದಂಧೆಯಾಗಿದ್ದು, ಇದನ್ನು ಮಟ್ಟ ಹಾಕಬೇಕಿದೆ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.