ಬೆಂಗಳೂರು: ಜಗತ್ತೇ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದ್ದಾಗ ಭಾರತವನ್ನು ಸಹಕಾರ ಕ್ಷೇತ್ರ ಕಾಪಾಡಿತ್ತು ಎಂದು ಸಂಸದ ಡಿ.ವಿ. ಸದಾನಂದ ಗೌಡ ತಿಳಿಸಿದರು.
ನಗರದಲ್ಲಿ ಭಾನುವಾರ ನಡೆದ ದಿ ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘2008ರಲ್ಲಿ ಆರ್ಥಿಕ ಕುಸಿತವು ಎಲ್ಲ ದೇಶಗಳನ್ನು ಕಾಡಿತ್ತು. ಅಮೆರಿಕ ಸಹಿತ ಅನೇಕ ಮುಂದುವರಿದ ದೇಶಗಳು ತತ್ತರಿಸಿದ್ದವು. ಆದರೆ, ಭಾರತದಲ್ಲಿ ಯಾವುದೇ ಪರಿಣಾಮಗಳು ಉಂಟಾಗಿರಲಿಲ್ಲ. ನಮ್ಮ ದೇಶದ ಸಹಕಾರ ಸಂಸ್ಥೆಗಳು ಆರ್ಥಿಕತೆಗೆ ಹೊಸ ದಿಕ್ಕನ್ನು ತೋರಿದ್ದು ಕಾರಣ’ ಎಂದು ವಿಶ್ಲೇಷಿಸಿದರು.
‘ಇರುವ ಆದಾಯದಲ್ಲಿಯೇ ಕುಟುಂಬದ ಎಲ್ಲರನ್ನು ಸಂಭಾಳಿಸುವ ತಾಯಿಯ ಗುಣ, ಕೃಷಿಕರು ಸಹಕಾರ ಬ್ಯಾಂಕ್‌ಗಳಲ್ಲಿಯೇ ವ್ಯವಹಾರಗಳನ್ನು ನಡೆಸಿರುವುದು ಮತ್ತು ಎಷ್ಟೇ ಕಡಿಮೆ ಆದಾಯವಿದ್ದರೂ ಅದರಲ್ಲಿ ಒಂದಂಶ ಉಳಿಸುವ ಜನರ ಮನಃಸ್ಥಿತಿಯು ಆರ್ಥಿಕ ಹಿಂಜರಿತವನ್ನು ತಡೆದಿದ್ದವು’ ಎಂದು ಹೇಳಿದರು.
ಇವೆಲ್ಲವನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಆರಂಭಿಸಿದ್ದಲ್ಲದೇ ಆಧುನಿಕ ಚಾಣಕ್ಯ ಅಮಿತ್ ಶಾ ಅವರನ್ನು ಈ ಇಲಾಖೆಯ ಸಚಿವರನ್ನಾಗಿ ಮಾಡಿದರು ಎಂದು ತಿಳಿಸಿದರು.
ಶಾಸಕ ಸಿ.ಎನ್. ಅಶ್ವಥನಾರಾಯಣ ಮಾತನಾಡಿ, ‘ಉಳ್ಳವರು ಮತ್ತು ಇಲ್ಲದವರು ಒಂದಾಗಬೇಕು, ಸಂಪತ್ತು ಹಂಚಿಕೆಯಾಗಬೇಕು ಎಂಬ ಕಾರಣಕ್ಕೆ ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ಸಹಕಾರ ಸಂಸ್ಥೆಗಳು ಆರಂಭವಾಗಿದ್ದವು. ಅವುಗಳಲ್ಲಿ ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ಪ್ರಧಾನವಾದುದು’ ಎಂದು ಹೇಳಿದರು.
ಹಲವು ಸಹಕಾರ ಸಂಸ್ಥೆಗಳು ಆರಂಭವಾಗಿದ್ದವು. ಕೆಲವು ಅರ್ಧದಲ್ಲಿಯೇ ಮುಚ್ಚಿ ಹೋದವು. ಬದ್ಧತೆ, ಪ್ರಾಮಾಣಿಕತೆ ಇದ್ದರೆ ಸಹಕಾರ ಸಂಸ್ಥೆಗಳು ಮುನ್ನಡೆಯುತ್ತವೆ ಎಂಬುದಕ್ಕೆ ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ಸಾಕ್ಷಿ ಎಂದು ತಿಳಿಸಿದರು.
ಬ್ಯಾಂಕ್ ಅಧ್ಯಕ್ಷ ಬಿ. ರಮೇಶ್ ಮಾತನಾಡಿ, ‘ಈ ಪ್ರದೇಶದಲ್ಲಿ ಬ್ಯಾಂಕಿಂಗ್ ಸೇವೆಗಳ ಕೊರತೆಯನ್ನು ನೀಗಿಸಲು ನಮ್ಮ ಹಿರಿಯರು 1920ರಲ್ಲಿ ಈ ಸಹಕಾರ ಬ್ಯಾಂಕ್ ಅನ್ನು ಸ್ಥಾಪಿಸಿದ್ದರು. 2020ಕ್ಕೆ 100 ವರ್ಷವಾಗಿತ್ತು. ಕೋವಿಡ್ ಕಾರಣದಿಂದ ಆಗ ಶತಮಾನೋತ್ಸವ ಆಚರಿಸಲು ಆಗಿರಲಿಲ್ಲ’ ಎಂದು ಮಾಹಿತಿ ನೀಡಿದರು.
ಹಿರಿಯ ಸದಸ್ಯರು, 25ಕ್ಕೂ ಅಧಿಕ ವರ್ಷಗಳಿಂದ ನಿರ್ದೇಶಕರಾಗಿದ್ದವರು, ಮಾಜಿ ನಿರ್ದೇಶಕರು, ನಿವೃತ್ತ ಸಿಬ್ಬಂದಿಯನ್ನು ಮತ್ತು ಸಹಕಾರ ಕ್ಷೇತ್ರದಲ್ಲಿ 100 ವರ್ಷ ಪೂರೈಸಿದ ಸಂಸ್ಥೆಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಾಜಿ ಸಚಿವ ರಾಮಚಂದ್ರ ಗೌಡ, ಸಂಸ್ಥೆಯ ಉಪಾಧ್ಯಕ್ಷ ಶಂಕರ್ ವಿ., ನಿರ್ದೇಶಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.