ADVERTISEMENT

ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ: ಬಿಕೆಸಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 19:45 IST
Last Updated 28 ಆಗಸ್ಟ್ 2019, 19:45 IST
ಬಿ.ಕೆ.ಚಂದ್ರಶೇಖರ್‌
ಬಿ.ಕೆ.ಚಂದ್ರಶೇಖರ್‌   

ಬೆಂಗಳೂರು: ‘ಮೈತ್ರಿ ಮಾಡಿಕೊಂಡ ಪಕ್ಷಗಳ ನಾಯಕರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಪರಸ್ಪರ ದೂಷಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಬಿ.ಕೆ.ಚಂದ್ರಶೇಖರ್‌ ಅಭಿಪ್ರಾಯಪಟ್ಟರು.

‘ಪ್ರಜಾವಾಣಿ’ ಜೊತೆ ಬುಧವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರ ಆರಂಭವಾದ ದಿನಗಳಿಂದ ಉಭಯ ಪಕ್ಷಗಳ ನಾಯಕರು ಮೈತ್ರಿ ಧರ್ಮಕ್ಕೆ ಅನುಗುಣವಾಗಿ ನಡೆದುಕೊಳ್ಳಲಿಲ್ಲ. ಮೈತ್ರಿ ಸರ್ಕಾರ ರಚನೆಯಾದ ಬಳಿಕವೂ ಕಾಂಗ್ರೆಸ್‌ ಶಾಸಕರು, ‘ನಮಗೆ ಈಗಲೂ ಸಿದ್ದರಾಮಯ್ಯ ಮುಖ್ಯಮಂತ್ರಿ’ ಎಂಬ ಹೇಳಿಕೆ ನೀಡಿದ್ದು ಸರಿಯಲ್ಲ. ಸಿದ್ದರಾಮಯ್ಯ ಅವರೂ ಇದನ್ನು ತಡೆಯುವ ಪ್ರಯತ್ನ ಮಾಡಿರಲಿಕ್ಕೂ ಸಾಕು. ಆದರೆ ಮೈತ್ರಿ ಧರ್ಮಕ್ಕೆ ಪೂರಕವಲ್ಲದ ಹೇಳಿಕೆಗಳು ನಿಲ್ಲಲಿಲ್ಲ. ಈ ಪ್ರವೃತ್ತಿ ಬಹಿರಂಗವಾಗಿ ಮುಂದುವರಿದಿದ್ದರಿಂದ ಸಮ್ಮಿಶ್ರ ಸರ್ಕಾರವನ್ನು ಕಳೆದುಕೊಳ್ಳಬೇಕಾಗಿ ಬಂತು’ ಎಂದರು.

‘‘ಮೈತ್ರಿಯಿಂದ ನಮಗೆ ನಷ್ಟವಾಗಿದೆ’ ಎಂಬರ್ಥದಲ್ಲಿ ಕಾರ್ಯಕರ್ತರು ಮಾತನಾಡಿಕೊಳ್ಳಲು ಆರಂಭಿಸಿದರು. ನಾಯಕರಾದವರು ಮೈತ್ರಿಯನ್ನು ಏಕೆ ಮಾಡಿಕೊಂಡಿದ್ದೇವೆ ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕಿತ್ತು. ಈ ಪ್ರಯತ್ನ ನಡೆಯಲೇ ಇಲ್ಲ. ಯಾವುದೇ ಸಮ್ಮಿಶ್ರ ಸರ್ಕಾರದಲ್ಲಿ ಪಾಲ್ಗೊಂಡ ಪಕ್ಷಗಳಿಗೆ ಅನುಕೂಲ– ಅನನುಕೂಲವಾಗುವುದು ಅನಿವಾರ್ಯ’ ಎಂದರು.

ADVERTISEMENT

‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಇತ್ತೀಚೆಗೆ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಶಾಸಕರನ್ನು ಕಡೆಗಣಿಸಿದ್ದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಪ್ರತ್ಯುತ್ತರ ನೀಡಿದರು. ಆದರೆ, ಅದಕ್ಕೆ ಪ್ರತಿಯಾಗಿ, ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ₹ 19 ಸಾವಿರ ಕೋಟಿ ಅನುದಾನ ನೀಡಿದ್ದಾಗಿ ಅಂಕಿ–ಅಂಶ ನೀಡಿದ್ದಲ್ಲದೇ ಬಹಿರಂಗ ಚರ್ಚೆಗೂ ಆಹ್ವಾನಿಸಿದ್ದಾರೆ. ಈ ಆಹ್ವಾನವನ್ನು ಸಿದ್ದರಾಮಯ್ಯ ಒಪ್ಪಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಅನರ್ಹಗೊಂಡ ಶಾಸಕರು ಆರೋಪ ಮಾಡಿರುವುದನ್ನು ಕೇಳಿದ್ದೇನೆ. ಇದು ನಿಜವೋ ಸತ್ಯವೋ ತಿಳಿಯದು. ಆದರೆ, ಆದರೆ, ಈ ರೀತಿ ಹೇಳಿಕೆಗಳು ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಲೂ ಇತ್ತು. ಸ್ವತಃ ನನಗೇ ಈ ಅನುಭವ ಆಗಿದೆ. ನಮ್ಮ ಪಕ್ಷದ ಇಬ್ಬರು ಸಚಿವರುಗಳಿಂದಲೂ ಕಹಿ ಅನುಭವ ಆಗಿದ್ದರೂ ಈವರೆಗೂ ನಾನು ಮಾತನಾಡಿಲ್ಲ’ ಎಂದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ನಾನು ಯಾವುದೇ ಅನುಕೂಲ ಪಡೆದಿಲ್ಲ. ಮೈತ್ರಿ ಸರ್ಕಾರ ರಚನೆಯಾದ ಬಳಿಕ ಕುಮಾರಸ್ವಾಮಿ ಅವರನ್ನಾಗಲೀ ದೇವೇಗೌಡರನ್ನಾಗಲೀ ಭೇಟಿಯೇ ಆಗಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯಬೇಕೆಂಬುದಷ್ಟೇ ನನ್ನ ಆಶಯ’ ಎಂದು ಸ್ಪಷ್ಟಪಡಿಸಿದರು.

‘ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ’

‘ಕಾಂಗ್ರೆಸ್‌ ಪಕ್ಷದೊಳಗೂ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಅಧಿಕಾರ ಕೇವಲ ನಾಲ್ಕೈದು ಮಂದಿಯ ಕೈಯಲ್ಲಿ ಕೇಂದ್ರೀಕೃತವಾಗಿದೆ. ಪಕ್ಷದ ನಾಯಕರಲ್ಲಿ ಸೃಜನಶೀಲತೆಯೂ ಇಲ್ಲ. ಹಾಗಾಗಿ ಮತ್ತೆ ಜನರ ವಿಶ್ವಾಸ ಗಳಿಸುವ ಯಾವುದೇ ಪ್ರಯತ್ನಗಳೂ ನಡೆಯುತ್ತಿಲ್ಲ. ಶಾಸಕರ ಸಂಕಷ್ಟಗಳೂ ಒಳಗೊಂದಂತೆ ಪ್ರಮುಖ ವಿಷಯಗಳು ಪಕ್ಷದೊಳಗೆ ಚರ್ಚೆಗೆ ಬರಬೇಕಿತ್ತು’ ಎಂದು ಬಿ.ಕೆ.ಸಿ ಬೇಸರ ವ್ಯಕ್ತಪಡಿಸಿದರು.

‘ಮೈತ್ರಿಕೂಟಗಳು ಅನಿವಾರ್ಯ’

‘ದೇಶದಲ್ಲಿ ಅನೇಕ ಪ್ರಾದೇಶಿಕ ಹಿತಾಸಕ್ತಿಗಳು ಇವೆ. ಭವಿಷ್ಯದಲ್ಲೂ ಒಂದೇ ಪಕ್ಷ ಆಡಳಿತಕ್ಕೆ ಬರುವುದು ಅನುಮಾನ. ಹಾಗಾಗಿ ಮೈತ್ರಿಕೂಟಗಳು ಅನಿವಾರ್ಯ ಆಗಲಿವೆ. ಬಿಜೆಪಿಯೂ ಹೆಚ್ಚೆಂದರೆ ಐದು ವರ್ಷ ಇದೇ ರೀತಿಯ ಜನಮತ ಪಡೆಯಬಹುದು. ರಾಜ್ಯದಲ್ಲಿ ಜೆಡಿಎಸ್‌ ಜೊತೆಗಿನ ಮೈತ್ರಿ ಉಳಿಸಿಕೊಂಡರೆ ಅದರಿಂದ ಕಾಂಗ್ರೆಸ್‌ಗೆ ದೀರ್ಘಾವಧಿಯಲ್ಲಿ ಅನುಕೂಲವೇ ಆಗಲಿದೆ’ ಎಂದುಬಿ.ಕೆ.ಸಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.