ಬೆಂಗಳೂರು: ಹೊಸ ಮೂರು ಕ್ರಿಮಿನಲ್ ಅಪರಾಧ ಕಾನೂನುಗಳು ಸೋಮವಾರದಿಂದ ಜಾರಿಗೆ ಬರುತ್ತಿದ್ದು, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದ್ದಾರೆ.
ಬಿಎನ್‌ಎಸ್ ಕಾಯ್ದೆಗಳ ಅನುಷ್ಠಾನ ಕುರಿತು ಈಗಾಗಲೇ ಇಲಾಖೆ ಎಲ್ಲ ಹಂತದ ಅಧಿಕಾರಿ ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಜತೆಗೆ, ಮೈಸೂರು ಪೊಲೀಸ್ ಅಕಾಡೆಮಿಯಿಂದ ಕನ್ನಡದಲ್ಲೇ ಹೊಸ ಕಾಯ್ದೆಗಳ ಕನ್ನಡ ಕೈಪಿಡಿ ಸಿದ್ದಪಡಿಸಿ ವಿತರಿಸಲಾಗಿದೆ. ಅದೇ ಪ್ರಕಾರ ಸೋಮವಾರದಿಂದ ಪೊಲೀಸರು ಬಿಎನ್‌ಎಸ್ ಕಾಯ್ದೆಗಳನ್ನು ಉಲ್ಲೇಖಿಸಿ ಎಫ್‌ಐಆರ್ ದಾಖಲಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಹೊಸ ಕಾಯ್ದೆ ಹಾಗೂ ಕಲಂಗಳು ಎಫ್‌ಐಆರ್‌ನಲ್ಲಿ ಮಾತ್ರವಲ್ಲದೆ, ಪೊಲೀಸ್ ಐ.ಟಿ (ವೆಬ್‌ಸೈಟ್)ಯಲ್ಲೂ ಬದಲಾವಣೆ ಆಗಿದೆ. ಎಫ್‌ಐಆರ್ ಜತೆಗೆ ಇಲ್ಲಿಯೂ ಬಿಎನ್‌ಎಸ್, ಬಿಎನ್‌ಎಸ್‌ಎಸ್ ಮತ್ತು ಬಿಎಸ್‌ಎ ಕಾಯ್ದೆಗಳ ಬಗ್ಗೆಯೂ ಸಾರ್ವಜನಿಕರಿಗೆ ಮಾಹಿತಿ ಲಭ್ಯವಾಗುವಂತೆ ಸಿದ್ದಪಡಿಸಲಾಗಿದೆ. ಪೊಲೀಸ್ ಐ.ಟಿ ಸಂಪೂರ್ಣವಾಗಿ ಬದಲಾಗಿ, ಹೊಸ ಸ್ವರೂಪದಲ್ಲಿ ಲಭ್ಯವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಾನೂನು ಕಾಲೇಜುಗಳು ಉಪನ್ಯಾಸಕರು, ನಿವೃತ್ತ ನ್ಯಾಯಮೂರ್ತಿಗಳ ಮೂಲಕ ಯಾವ ಅಪರಾಧಕ್ಕೆ ಯಾವ ಕಾಯ್ದೆ ಅಳವಡಿಸಬೇಕು? ಈ ಹೊಸ ಕಾಯ್ದೆಗಳು ಹಾಗೂ ಕಲಂಗಳ ಬಗ್ಗೆ ತರಬೇತಿ ನೀಡಲಾಗಿದೆ. ಕಾರ್ಯಾಗಾರಗಳು, ವಿಚಾರಸಂಕಿರಣಗಳು, ತರಬೇತಿ ಶಿಬಿರಗಳು, ಕಾನೂನು ತಜ್ಞರೊಂದಿಗೆ ಸಂವಾದ ಏರ್ಪಡಿಸಿ ಅರಿವು ಮೂಡಿಸಲಾಗಿದೆ. ಈ ಹೊಸ ಕಾಯ್ದೆಗಳ ಬಗ್ಗೆ ಕಳೆದ ಒಂದೂವರೆ ತಿಂಗಳಿಂದ ಕಾನ್‌ಸ್ಟೆಬಲ್‌ನಿಂದ ಎಸ್ಪಿ/ಡಿಸಿಪಿ ಹಂತದ ಅಧಿಕಾರಿಗಳಿಗೆ ಹಂತ ಹಂತವಾಗಿ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.