ಪೀಣ್ಯ ದಾಸರಹಳ್ಳಿ: ಎಚ್‌ಎಂಟಿ ಬಡಾವಣೆಯಲ್ಲಿ ಸಾರ್ವಜನಿಕ ಸೌಲಭ್ಯಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಯಾವ ರೀತಿಯ ಅಭಿವೃದ್ಧಿ ಕಾರ್ಯ ಅನುಕೂಲವಾಗುತ್ತದೆ ಎಂಬುದನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹ್ಯಾರಿಸ್ ಹೇಳಿದರು.
ಚೊಕ್ಕಸಂದ್ರ ವಾರ್ಡ್‌ನ ಎಚ್.ಎಂ.ಟಿ ಬಡಾವಣೆಯಲ್ಲಿರುವ 3 ಎಕರೆ 23 ಗುಂಟೆ ಖಾಲಿ ಜಾಗವನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡಿದರು.
'ಶಾಸಕ ಮುನಿರಾಜು ಅವರ ಮನವಿ ಮೇರೆಗೆ ಸ್ಥಳ ಪರಿಶೀಲಿಸಲಾಗಿದೆ. ಅವರ ಬೇಡಿಕೆಯಂತೆ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಕುರಿತು ಯೋಚಿಸಲಾಗುವುದು’ ಎಂದು ತಿಳಿಸಿದರು.
ಶಾಸಕ ಎಸ್. ಮುನಿರಾಜು ಮಾತನಾಡಿ 'ಈ ಬಡಾವಣೆ ನಿರ್ಮಾಣ ಮಾಡಿದಾಗ 3 ಎಕರೆ 23 ಗುಂಟೆ ಜಾಗವನ್ನು ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಮೀಸಲಿಡಲಾಗಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಇತ್ತೀಚಿಗೆ ಸಚಿವ ಡಿ.ಕೆ ಶಿವಕುಮಾರ್ ಅವರು ಜನಸ್ಪಂದನಾ ಕಾರ್ಯಕ್ರಮ ನಡೆಸಿದಾಗ, ಈ ಬೇಡಿಕೆಯನ್ನು ಇಟ್ಟಿದ್ದೆ. ನಂತರ ಶಾಸಕರ ಸಭೆಯಲ್ಲೂ ವಿಷಯ ಪ್ರಸ್ತಾಪಿಸಿದ್ದೆ, ಅದಕ್ಕಾಗಿ ಅವರು ಜಾಗ ಪರಿಶೀಲನೆಗೆ ಕಳುಹಿಸಿದ್ದಾರೆ' ಎಂದರು.
ಬಿಡಿಎ ಆಯುಕ್ತ ಎನ್.ಜಯರಾಮ್, ಎಂಜಿನಿಯರ್ ನಿರಂಜನ್, ಬಿಡಿಎ ಅಧಿಕಾರಿ ನಾರಾಯಣಗೌಡ, ಸ್ಥಳೀಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.