ADVERTISEMENT

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ| ಪೂರ್ವವಲಯದಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 20:14 IST
Last Updated 20 ಜೂನ್ 2019, 20:14 IST

ಬೆಂಗಳೂರು: ಪರಿಷ್ಕೃತ ನಗರ ಮಹಾಯೋಜನೆ 2015ರ ಪ್ರಕಾರ ವಸತಿ ಪ್ರದೇಶ ಎಂದು ಗುರುತಿಸಿರುವ ಕಡೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಮಳಿಗೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ.

ಇಂತಹ ಪ್ರಕರಣಗಳು ಅತಿಹೆಚ್ಚು ಇರುವ ಪೂರ್ವ ವಲಯದಿಂದಲೇ ಕಾರ್ಯಾಚರಣೆ ಆರಂಭಿಸಲು ಪಾಲಿಕೆ ಸಿದ್ಧತೆ ನಡೆಸಿದೆ.

ಇದುವರೆಗೆ ವಸತಿ ಪ್ರದೇಶದಲ್ಲಿ ಒಟ್ಟು 8,493 ಮಳಿಗೆಗಳನ್ನು ಗುರುತಿಸಿರುವ ಪಾಲಿಕೆಯು, ಇವುಗಳ ಮಾಲೀಕರಿಗೆ ನೋಟಿಸ್‌ ರವಾನೆ ಮಾಡಿದೆ.

ADVERTISEMENT

ಈ ಪೈಕಿ 3,500ಕ್ಕೂ ಅಧಿಕ ಮಳಿಗೆಗಳು ಪೂರ್ವ ವಲಯದಲ್ಲೇ ಇವೆ. ಬಾಣಸವಾಡಿ, ಕೆ.ಜಿ.ಹಳ್ಳಿ, ಕಮ್ಮನಹಳ್ಳಿ, ಇಂದಿರಾನಗರ, ಎಚ್‌ಬಿಆರ್‌ ಬಡಾವಣೆ ಹಾಗೂ ತಿಪ್ಪಸಂದ್ರ ಪ್ರದೇಶಗಳಲ್ಲೇ ಇಂತಹ ಪ್ರಕರಣಗಳು ಹೆಚ್ಚು ಇವೆ.

ಪಶ್ಚಿಮ ವಲಯದ ಪ್ರಮುಖ ಪ್ರದೇಶಗಳಲ್ಲೂ ಇಂತಹ 2,100 ಮಳಿಗೆಗಳಿಗೆ ಪಾಲಿಕೆ ನೋಟಿಸ್‌ ನಿಡಿದೆ. ಸದಾಶಿವನಗರ, ಮಲ್ಲೇಶ್ವರ, ಗಾಯತ್ರಿನಗರ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚು ಇದೆ.

ಪಾಲಿಕೆಯು ವಿವಿಧ ವಲಯಗಳಲ್ಲಿ ಇದುವರೆಗೆ 715 ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಿದೆ. ಉಳಿದ ಮಳಿಗೆಗಳ ವಿರುದ್ಧ ಇನ್ನಷ್ಟೇ ಕ್ರಮ ಕೈಗೊಳ್ಳಬೇಕಿದೆ.

‘ಪೂರ್ವ ಹಾಗೂ ಪಶ್ಚಿಮ ವಲಯಗಳಲ್ಲಿ ವಸತಿ ಪ್ರದೇಶಗಳಲ್ಲಿರುವ ಅಂಗಡಿಗಳನ್ನು ಆದ್ಯತೆ ಮೇರೆಗೆ ಮುಚ್ಚಿಸುತ್ತೇವೆ. ಉಳಿದ ವಲಯಗಳಲ್ಲೂ ಇಂತಹ ಮಳಿಗೆಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚುವಂತೆ ಮನವಿ ಮಾಡುತ್ತೇವೆ. ಇಲ್ಲದಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ಮನೋರಂಜನ್‌ ಹೆಗ್ಡೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.