ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ವಹಣೆ ಮತ್ತು ಹೊಸದಾಗಿ ನಿರ್ಮಿಸಲು ಸಮಗ್ರ ಯೋಜನೆ ರೂಪಿಸಲು ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಹೈಕೋರ್ಟ್ ನಿರ್ದೇಶನದಂತೆ, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸಮಿತಿ ರಚಿಸಲಾಗಿದೆ. ಶೌಚಾಲಯಗಳನ್ನು ನಿರ್ಮಿಸಲು ಜನದಟ್ಟಣೆ ಪ್ರದೇಶ, ಮಾರುಕಟ್ಟೆಗಳು ಸೇರಿದಂತೆ ಪ‍್ರಮುಖ ಸ್ಥಳಗಳನ್ನು ಗುರುತಿಸಿ ಕೂಡಲೇ ಪಟ್ಟಿ ನೀಡಲು ವಲಯ ಆಯುಕ್ತರಿಗೆ ಸೂಚನೆ ನೀಡಿದರು.
ನಗರದಲ್ಲಿ 255 ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸ್ಥಳಗಳನ್ನು ಗುರುತಿಸಲಾಗಿದೆ. ಶೌಚಾಲಯ ನಿರ್ಮಿಸುವ ಸ್ಥಳ ವಿಶಾಲವಾಗಿರಬೇಕಿದ್ದು, ಕೇಂದ್ರ ಪ್ರದೇಶದಲ್ಲಿರಬೇಕು ಎಂದು ಹೇಳಿದ ಅವರು, ಹೊಸದಾಗಿ 46 ಶೌಚಾಲಯಗಳನ್ನು ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಸ್ವಚ್ಛ ಭಾರತ್, ಶುಭ್ರ ಬೆಂಗಳೂರು, ನಗರೋತ್ಥಾನ ಮತ್ತು ಬಿಬಿಎಂಪಿ ಅನುದಾನಗಳನ್ನು ಸಾರ್ವಜನಿಕ ಶೌಚಾಲಯ ಮತ್ತು ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ತುರ್ತಾಗಿ ಬಳಸಿಕೊಳ್ಳಬೇಕು. ಶೌಚಾಲಯ ಬಳಕೆಗೆ ಶುಲ್ಕ ವಸೂಲಿ ಮಾಡಬಹುದು. ಸಾರ್ವಜನಿಕ– ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಶೌಚಾಲಯ ನಿರ್ಮಿಸಲು ಸಮಿತಿ ಮುಂದೆ ಪ್ರಸ್ತಾಪ ಮಂಡಿಸಿ, ಸಮ್ಮತಿ ಪಡೆಯಬೇಕು ಎಂದರು.
‘ಶಿ‘ ಟಾಯ್ಲೆಟ್ ನಿರ್ಮಾಣ: ನಗರದಲ್ಲಿ ಮಹಿಳೆಯರು ಹೆಚ್ಚಾಗಿ ಸಂಚರಿಸುವ/ ಓಡಾಡುವ ಸ್ಥಳಗಳನ್ನು ಗುರುತಿಸಿ 100 ಮಹಿಳಾ ಶೌಚಾಲಯ (ಶಿ ಟಾಯ್ಲೆಟ್) ಗಳನ್ನು ನಿರ್ಮಾಣ ಮಾಡಬೇಕು ಎಂದು ತುಷಾರ್ ಗಿರಿನಾಥ್ ಸೂಚಿಸಿದರು.
ಇಂದಿರಾ ಕ್ಯಾಂಟೀನ್ ಶೌಚಾಲಯ ಸಾರ್ವಜನಿಕರಿಗೆ: ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿರ್ಮಿಸಿರುವ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಅವಕಾಶ ನೀಡಬೇಕು. ಈ ಸಂಬಂಧ ಆದೇಶ ಹೊರಡಿಸಲು ಸೂಚನೆ ನೀಡಲಾಯಿತು.
ಸಭೆಯಲ್ಲಿ ಘನತ್ಯಾಜ್ಯ ವಿಭಾಗದ ವಿಶೇಷ ಅಯುಕ್ತ ಡಾ. ಕೆ. ಹರೀಶ್ ಕುಮಾರ್, ಕಲ್ಯಾಣ ವಿಶೇಷ ಆಯುಕ್ತ ರೆಡ್ಡಿ ಶಂಕರ ಬಾಬು, ಎಲ್ಲಾ ವಲಯ ಆಯುಕ್ತರು, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ, ಬಿಎಸ್‌ಡಬ್ಲ್ಯುಎಂಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ್ ಕಬಾಡೆ ಇದ್ದರು.
ಇ ಶೌಚಾಲಯ ಸ್ಥಗಿತ!
ನಗರದಲ್ಲಿ 229 ಇ–ಶೌಚಾಲಯಗಳಿದ್ದು, ನಿರ್ವಹಣೆ ಇಲ್ಲದೆ ಅವುಗಳನ್ನು ಸ್ಥಗಿತಗೊಳಿಸಲಾಗಿದೆ. ನಿರ್ವಹಣೆಗೆ ಟೆಂಡರ್ ಆಹ್ವಾನಿಸಿದ್ದರೂ ಯಾರೂ ಮುಂದೆ ಬಂದಿಲ್ಲ. ಎರಡನೇ ಬಾರಿ ಟೆಂಡರ್ ಕರೆಯಲಾಗಿದೆ. ಇ–ಶೌಚಾಲಯಗಳ ನಿರ್ವಹಣೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಬಸ್ ತಂಗುದಾಣಗಳ ಬಳಿ ಇ-ಶೌಚಾಲಯಗಳನ್ನು ಅಳವಡಿಸು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ತುಷಾರ್ ಗಿರಿನಾಥ್ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಯಾರಿಗೆ ಯಾವ ಜವಾಬ್ದಾರಿ?
* ಪ್ರಧಾನ ಎಂಜಿನಿಯರ್: ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ವಹಣ ಹಾಗೂ ನಿರ್ಮಾಣಕ್ಕೆ ಅಡೆತಡೆಗಳನ್ನು ನಿವಾರಿಸುವುದು.
* ವಿಶೇಷ ಆಯುಕ್ತ (ಕಲ್ಯಾಣ): ಶೌಚಾಲಯಗಳನ್ನು ಆಗಾಗ್ಗೆ ತಪಾಸಣೆ ನಡೆಸಿ, ಮಹಿಳೆಯರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವುದು.
* ಮುಖ್ಯ ಎಂಜಿನಿಯರ್ (ರಸ್ತೆ ಮೂಲಸೌಕರ್ಯ): ಟಿಇಸಿ ವಿಭಾಗದ ಮೂಲಕ ಶೌಚಾಲಯಗಳಿಗೆ ನಾಮಫಲಕ(ಸೈನೇಜ್ ಬೋರ್ಡ್) ಅಳವಡಿಸುವುದು.
* ಮುಖ್ಯ ಆರೋಗ್ಯಾಧಿಕಾರಿ: ಶೌಚಾಲಯಗಳ ಸ್ವಚ್ಛತೆ ಮತ್ತು ಸೂಕ್ತ ಉಪಕರಣಗಳ ಲಭ್ಯತೆ, ಸೌಲಭ್ಯಗಳನ್ನು ಪರಿಶೀಲಿಸುವುದು.
* ಘನತ್ಯಾಜ್ಯ ಮುಖ್ಯ ಎಂಜಿನಿಯರ್: ಶೌಚಾಲಯಗಳ ನಿರ್ಮಾಣಕ್ಕೆ ಜಾಗಗಳನ್ನು ಗುರುತಿಸುವುದಕ್ಕೆ ವಲಯ ಜಂಟಿ ಆಯುಕ್ತರೊಂದಿಗೆ ಸಮನ್ವಯ ಸಾಧಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.