ADVERTISEMENT

ಬೆಂಗಳೂರು | ಕುಂದು ಕೊರತೆ: ಪಾದಚಾರಿ ಮಾರ್ಗ ಸರಿಪಡಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 0:03 IST
Last Updated 21 ಅಕ್ಟೋಬರ್ 2024, 0:03 IST
ಬನಶಂಕರಿಯಿಂದ ಮೈಸೂರು ರಸ್ತೆಗೆ ಸಂಪರ್ಕಿಸುವ ರಸ್ತೆಯ ಪಾದಚಾರಿ ಮಾರ್ಗದ ದುಃಸ್ಥಿತಿ
ಬನಶಂಕರಿಯಿಂದ ಮೈಸೂರು ರಸ್ತೆಗೆ ಸಂಪರ್ಕಿಸುವ ರಸ್ತೆಯ ಪಾದಚಾರಿ ಮಾರ್ಗದ ದುಃಸ್ಥಿತಿ   

‘ಪಾದಚಾರಿ ಮಾರ್ಗ ಸರಿಪಡಿಸಿ’

ನ್ಯಾಯಂಡಹಳ್ಳಿ ಜಂಕ್ಷನ್‌ನ ಬನಶಂಕರಿ ಕಡೆಯಿಂದ ಮೈಸೂರು ರಸ್ತೆಯನ್ನು ಸಂಪರ್ಕಿಸುವ ಸ್ಥಳದಲ್ಲಿ ವೃಷಭಾವತಿ ಕಾಲುವೆಗೆ ಸೇತುವೆ ನಿರ್ಮಿಸಲಾಗಿದೆ. ಈ ರಸ್ತೆಯ ಎರಡೂ ಬದಿಯಲ್ಲಿ ಎರಡು ಅಡಿಯ ಪಾದಚಾರಿ ಮಾರ್ಗ ನಿರ್ಮಿಸಲಾಗಿತ್ತು. ಆದರೆ, ಇತ್ತೀಚೆಗೆ ಕೆಲವರು ವಿದ್ಯುತ್‌ ಸಂಪರ್ಕ ಪಡೆಯಲು ಈ ಪಾದಚಾರಿ ಮಾರ್ಗವನ್ನು ಅಗೆದು ಹಾಗೆಯೇ ಬಿಟ್ಟಿದ್ದಾರೆ. ಇದರಿಂದ, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಈ ಹಾದಿಯಲ್ಲಿ ಓಡಾಡುವುದು ಕಷ್ಟವಾಗಿದ್ದು, ಮುಖ್ಯರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಬಿಬಿಎಂಪಿ ಕೂಡಲೇ ಇಲ್ಲಿನ ಪಾದಚಾರಿ ಮಾರ್ಗವನ್ನು ಸರಿಪಡಿಸಬೇಕು.

-ಎಂ. ಕೃಷ್ಣಪ್ಪ, ಪಂತರಪಾಳ್ಯ

ADVERTISEMENT

****

‘ತುಕ್ಕು ಹಿಡಿದ ಮಕ್ಕಳ ಆಟಿಕೆಗಳು’

ರಾಮಗೊಂಡನಹಳ್ಳಿಯ ಹಗಡೂರು ವಾರ್ಡ್‌ನ ವೈಟ್‌ಫೀಲ್ಡ್‌ ಇನ್ನರ್‌ ಸರ್ಕಲ್‌ನಲ್ಲಿರುವ ಉದ್ಯಾನದಲ್ಲಿರುವ ಮಕ್ಕಳ ಆಟಿಕೆಗಳಿಗೆ ತುಕ್ಕು ಹಿಡಿದಿದೆ. ಉದ್ಯಾನದಲ್ಲಿರುವ ಜೋಕಾಲಿ, ಜಾರುಬಂಡಿ ಸೇರಿದಂತೆ ವಿವಿಧ ಆಟಿಕೆಗಳನ್ನು ಬಳಸಲು ಪ್ರತಿನಿತ್ಯ ನೂರಾರು ಮಕ್ಕಳು ಬರುತ್ತಾರೆ. ತುಕ್ಕು ಹಿಡಿದ ಆಟಿಕೆಗಳಲ್ಲಿ ಮಕ್ಕಳು ಆಟ ಆಡುತ್ತಿದ್ದು, ಏನಾದರೂ ಅನಾಹುತವಾಗುವ ಸಾಧ್ಯತೆ ಇದೆ. ಆದ್ದರಿಂದ ಇಲ್ಲಿನ ಆಟಿಕೆಗಳನ್ನು ಬದಲಾಯಿಸಬೇಕು. 

-ರಾಜ್ ಕುಮಾರ್ ಕೆ., ರಾಮಗೊಂಡನಹಳ್ಳಿ

****

‘ಕಸದ ರಾಶಿ ತೆರವುಗೊಳಿಸಿ’

ಹೆಬ್ಬಾಳದ ಸುಮಂಗಲಿ ಸೇವಾಶ್ರಮದ ಬಳಿ ಇರುವ ಉದ್ಯಾನದ ಮುಂಭಾಗದ ರಸ್ತೆಯಲ್ಲಿ ಕಸ ಹಾಕಲಾಗುತ್ತಿದೆ. ಇದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಪ್ರತಿದಿನ ಉದ್ಯಾನಕ್ಕೆ ಬರುವ ವಾಯುವಿಹಾರಿಗಳು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಕೂಡಲೇ ಇಲ್ಲಿನ ಕಸ ತೆರವುಗೊಳಿಸುವ ಮೂಲಕ ಸ್ವಚ್ಛ ಮತ್ತು ಸುಂದರ ನಗರ ನಿರ್ಮಿಸಬೇಕು.

-ಜಿ.ಎಸ್.ಮಂಜುನಾಥ್, ಹೆಬ್ಬಾಳ

****

‘ಬಾಗಿದ ಟ್ರಾಫಿಕ್‌ ಸಿಗ್ನಲ್‌ ಕಂಬ’

ಕೆ.ಆರ್. ಪುರ ಸಂಚಾರ ವಿಭಾಗದ ಪೊಲೀಸ್ ಠಾಣೆಯ ಮುಂದೆ ಹೊಂದಿಕೊಂಡಿರುವ ರಾಷ್ತ್ರೀಯ ಹೆದ್ದಾರಿ–75ರಲ್ಲಿ ಟ್ರಾಫಿಕ್ ಸಿಗ್ನಲ್ ಕಂಬವೊಂದು ವಾಲಿದೆ. ಇಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವಾಲಿರುವ ಟ್ರಾಫಿಕ್‌ ಸಿಗ್ನಲ್‌ ಕಂಬವು ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಜೊತೆಗೆ ಈ ಪ್ರದೇಶದಲ್ಲಿರುವ ಶಾಲಾ–ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಜೀವ ಭಯದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ವಾಲಿದ ಟ್ರಾಫಿಕ್‌ ಸಿಗ್ನಲ್ ಕಂಬವನ್ನು ಸರಿಪಡಿಸುವ ಮೂಲಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.

-ಕಿರಣ್ ಕುಮಾರ್ ಜೆ., ಮೇಡಹಳ್ಳಿ

****

‘ರಸ್ತೆ ದುರಸ್ತಿಗೊಳಿಸಿ’

ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಇರುವ ರೆಫರಲ್ ಆಸ್ಪತ್ರೆ ಮುಂಭಾಗದ ರಸ್ತೆ ಸಂಪೂರ್ಣ ಹಾಳಾಗಿದೆ. ಇದೇ ರಸ್ತೆಗೆ ಜಲ್ಲಿ ಹಾಕಿರುವುದರಿಂದ ವಾಹನ ಸಂಚಾರಕ್ಕೆ ಅನನುಕೂಲವಾಗಿದೆ. ಇದರಿಂದ, ಆಸ್ಪತ್ರೆಗೆ ಬರುವ ರೋಗಿಗಳಿಗೂ ಸಮಸ್ಯೆ ಆಗುತ್ತಿದೆ. ಬಿಬಿಎಂಪಿ ಕೂಡಲೇ ಇಲ್ಲಿನ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.

-ಮೋಹನ್ ಕುಮಾರ್, ಬನಶಂಕರಿ

ಉದ್ಯಾನದಲ್ಲಿನ ಆಟಿಕೆಗೆ ತುಕ್ಕು ಹಿಡಿದಿರುವುದು.
ಸುಮಂಗಲಿ ರಸ್ತೆಯ ಉದ್ಯಾನದ ಮುಂಭಾಗದಲ್ಲಿ ಹಾಕಿರುವ ಕಸ
ಕೆ.ಆರ್. ಪುರದಲ್ಲಿ ರಾಷ್ಟ್ರೀಯ ಹೆದ್ದಾರಿ–75ರಲ್ಲಿ ಟ್ರಾಫಿಕ್‌ ಸಿಗ್ನಲ್‌ನ ಕಂಬವೊಂದು ವಾಲಿರುವುದು
ಬನಶಂಕರಿಯ ಬಿಡಿಎ ಕಾಂಪ್ಲೆಕ್ಸ್‌ ಮುಂಭಾಗದ ರಸ್ತೆ ಹಾಳಾಗಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.