ಬೆಂಗಳೂರು: ಗ್ರಾಮೀಣ ಪ್ರದೇಶ ಹಾಗೂ ಕೊಳೆಗೇರಿ ಪ್ರದೇಶದ ಜನರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ಆರೋಗ್ಯ ಇಲಾಖೆ ರೂಪಿಸಿರುವ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶನಿವಾರ ಚಾಲನೆ ದೊರೆಯಿತು.
ಈ ಮೊಬೈಲ್ ವಾಹನವು ರಾಜ್ಯದಾದ್ಯಂತ ಸಂಚರಿಸಿ, ವೈದ್ಯಕೀಯ ಸೇವೆ ನೀಡಲಿದೆ. ₹ 2 ಕೋಟಿ ಮೌಲ್ಯದ ವಾಹನವನ್ನು ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) ವೋಲ್ವೊ ಕಂಪನಿ ಇಲಾಖೆಗೆ ನೀಡಿದೆ. ಇದರ ವಾರ್ಷಿಕ ನಿರ್ವಹಣೆಗೆ ತಗಲುವ ಅಂದಾಜು ₹ 70 ಲಕ್ಷ ವೆಚ್ಚವನ್ನು ಕಂಪನಿಯೇ ಭರಿಸಲಿದೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಾರಾಯಣ ಹೆಲ್ತ್ ಒದಗಿಸಲಿದೆ.
ಸಂಚಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಾಲನೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಈ ಮೊಬೈಲ್ ವಾಹನ 42 ಅಡಿ ಉದ್ದವಿದೆ. ಇದರಲ್ಲಿ ಉಚಿತವಾಗಿ ವಿವಿಧ ತಪಾಸಣೆ ನಡೆಸಿ, ಚಿಕಿತ್ಸೆ ಒದಗಿಸಲಾಗುತ್ತದೆ. ಕೇಂದ್ರದಲ್ಲಿ ನಡೆಸಲಾಗುವ ಎಕ್ಸ್–ರೇ, ಇಸಿಜಿ ವಿವಿಧ ಪರೀಕ್ಷೆಗಳ ವರದಿಯನ್ನು ಆನ್‌ಲೈನ್ ವ್ಯವಸ್ಥೆಯ ಮೂಲಕ ನಾರಾಯಣ ಹೆಲ್ತ್‌ನ ತಜ್ಞ ವೈದ್ಯರು ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆ ನೀಡುತ್ತಾರೆ. ಈ ಕೇಂದ್ರದ ನೆರವಿನಿಂದ ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿ, ಚಿಕಿತ್ಸೆ ಒದಗಿಸಲು ಸಾಧ್ಯ’ ಎಂದು ಹೇಳಿದರು.
ಇನ್ನಷ್ಟು ಕೇಂದ್ರ: ‘ಈ ಕೇಂದ್ರವು ನಿಗದಿತ ದಿನಾಂಕಗಳಂದು ಸೇವೆ ನೀಡಲಿದೆ. ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಇಂಟರ್ನೆಟ್ ಸೌಲಭ್ಯ ಹೊಂದಿದೆ. ರಕ್ತ ಹಾಗೂ ವಿವಿಧ ಪರೀಕ್ಷೆಗಳ ಪ್ರಯೋಗಾಲಯವು ಇರಲಿದೆ. ರಾಸಾಯನಿಕ ಶೌಚಾಲಯ ಸೇರಿ ಹಲವು ವ್ಯವಸ್ಥೆಯಿದೆ. ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಸಮಸ್ಯೆ ಪತ್ತೆಗೆ ಆದ್ಯತೆ ನೀಡಲಾಗುತ್ತದೆ. ಈ ಕೇಂದ್ರ ಯಶಸ್ವಿಯಾದರೆ ಇನ್ನಷ್ಟು ಕೇಂದ್ರಗಳನ್ನು ಪ್ರಾರಂಭಿಸಲಾಗುವುದು’ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ನಾರಾಯಣ ಹೆಲ್ತ್‌ನ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ‘ತಡವಾಗಿ ರೋಗ ಪತ್ತೆಯಾದಲ್ಲಿ ಚಿಕಿತ್ಸೆ ಫಲಕಾರಿಯಾಗುವುದು ಕಷ್ಟ. ಆದ್ದರಿಂದ ಆರಂಭಿಕ ಹಂತದಲ್ಲಿಯೇ ರೋಗ ನಿರ್ಣಯ ಮಾಡಿ, ಚಿಕಿತ್ಸೆ ಒದಗಿಸಬೇಕು. ಸಂಚಾರಿ ಚಿಕಿತ್ಸಾ ಕೇಂದ್ರವು ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಚಿಕಿತ್ಸೆಗೆ ಸಹಕಾರಿಯಾಗಲಿದೆ. ಇದು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿದೆ’ ಎಂದರು.
ವೋಲ್ವೊ ಸಮೂಹದ ಅಧ್ಯಕ್ಷ ಕಮಲ್ ಬಾಲಿ, ‘ಗ್ರಾಮೀಣ ಪ್ರದೇಶದ ಜನರಿಗೆ ಇದ್ದಲ್ಲಿಯೇ ಆರೋಗ್ಯ ತಪಾಸಣೆಗೆ ಈ ಕೇಂದ್ರ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
ಯಾವೆಲ್ಲ ಸೌಲಭ್ಯ ಲಭ್ಯ?
* ಎಕೊ
* ಎಕ್ಸ್–ರೇ ಅಲ್ಟ್ರಾಸೌಂಡ್
* ಮ್ಯಾಮೋಗ್ರಾಮ್
* ವೈದ್ಯರ ಸಮಾಲೋಚನೆ
* ವೈದ್ಯಕೀಯ ಚಿಕಿತ್ಸೆ
* ಕ್ಯಾನ್ಸರ್ ತಪಾಸಣೆ
* ಹೃದಯ ಸಂಬಂಧಿ ಕಾಯಿಲೆ ಪತ್ತೆಗೆ ತಪಾಸಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.