ADVERTISEMENT

ಅಧಿಕಾರಿಗಳ ವಿರುದ್ಧ ದೂರು; ಮಂಪರು ಪರೀಕ್ಷೆ ಅಗತ್ಯ: ನ್ಯಾಯಮೂರ್ತಿ ಪಿ. ಕೃಷ್ಣ ಭಟ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 20:45 IST
Last Updated 4 ಆಗಸ್ಟ್ 2022, 20:45 IST
ನ್ಯಾಯಮೂರ್ತಿ ಪಿ.ಕೃಷ್ಣ ಭಟ್‌ ಅವರಿಗೆ ಗುರುವಾರ ಬೆಂಗಳೂರು ವಕೀಲರ ಸಂಘದ ವತಿಯಿಂದ ಹೈಕೋರ್ಟ್‌ನಲ್ಲಿ ಬೀಳ್ಕೊಡುಗೆ ನೀಡಲಾಯಿತು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಮತ್ತು ಪದಾಧಿಕಾರಿಗಳು ಇದ್ದರು
ನ್ಯಾಯಮೂರ್ತಿ ಪಿ.ಕೃಷ್ಣ ಭಟ್‌ ಅವರಿಗೆ ಗುರುವಾರ ಬೆಂಗಳೂರು ವಕೀಲರ ಸಂಘದ ವತಿಯಿಂದ ಹೈಕೋರ್ಟ್‌ನಲ್ಲಿ ಬೀಳ್ಕೊಡುಗೆ ನೀಡಲಾಯಿತು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಮತ್ತು ಪದಾಧಿಕಾರಿಗಳು ಇದ್ದರು   

ಬೆಂಗಳೂರು:‘ನ್ಯಾಯಾಂಗದ ಅಧಿಕಾರಿಗಳು, ಲೋಕಾಯುಕ್ತ, ಉಪಲೋಕಾಯುಕ್ತದಂತಹ ಮಹತ್ವದ ಸ್ಥಾನದಲ್ಲಿರುವವರ ವಿರುದ್ಧ ದೂರುಗಳು ಕೇಳಿಬಂದಾಗ ಮಂಪರು ಪರೀಕ್ಷೆಗೆ ಅವಕಾಶ ಇರಬೇಕು’ ಎಂದುನ್ಯಾಯಮೂರ್ತಿ ಪಿ. ಕೃಷ್ಣ ಭಟ್‌ ಪ್ರತಿಪಾದಿಸಿದರು.

ಇದೇ 7ಕ್ಕೆ ನಿವೃತ್ತಿ ಹೊಂದುತ್ತಿರುವ ನ್ಯಾಯಮೂರ್ತಿ ಕೃಷ್ಣ ಭಟ್‌ ಅವರಿಗೆ ಗುರುವಾರ ರಾಜ್ಯ ವಕೀಲರ ಪರಿಷತ್‌ ವತಿಯಿಂದ ಹೈಕೋರ್ಟ್‌ ಹಾಲ್‌ 1ರಲ್ಲಿ ಬೀಳ್ಕೊಡುಗೆ ನೀಡಲಾಯಿತು. ಈ ವೇಳೆ ಮಾತನಾಡಿದ ಅವರು, ‘ವಿಚಾರಣಾಧೀನ ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಿಗಳು ಸಂಭವನೀಯ ಪ್ರತೀಕಾರಗಳಿಗೆ ಎದೆಗುಂದದೆ ಕೆಲಸ ಮಾಡಿದರೆ ಸ್ವತಂತ್ರರಾಗಿರುತ್ತೀರಿ’ ಎಂದು ಕಿವಿಮಾತು ಹೇಳಿದರು.

ಬೆಂಗಳೂರು ವಕೀಲರ ಸಂಘದ ವತಿಯಿಂದ ನೀಡಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ನಿನ್ನೆಯಿಂದ ತೀವ್ರ ಜ್ವರದ ತಾಪದಲ್ಲಿದ್ದೆ. ಆದರೆ, ನಿಮ್ಮ ಈ ಪ್ರೀತ್ಯಾದರವನ್ನು ಬದಿಗಿರಿಸಲಾಗದೆ ಭಾವುಕನಾಗಿ ನಿಮ್ಮ ಮಧ್ಯದಲ್ಲಿ ನನ್ನನ್ನು ನಾನು ಕಂಡುಕೊಳ್ಳಲು ಬಂದಿದ್ದೇನೆ’ ಎಂದರು.

ADVERTISEMENT

’ಬೆಂಗಳೂರು ವಕೀಲರ ಸಂಘದ ಚುನಾವಣಾ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕಿದೆ ಮತ್ತು ಇದರ ಆರೋಗ್ಯ ಸುಧಾರಿಸಬೇಕಾದ ಅವಶ್ಯಕತೆ' ಎಂದು ಅವರು, ದೇಶದ ಚುನಾವಣಾ ಪದ್ಥತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಪೂರಕವಾಗಿ, ಶೇಷನ್‌ ಅವರ ಸುಧಾರಣೆ ಮತ್ತು ಬೆಲ್ಜಿಯಂ ಲೇಖಕರೊಬ್ಬರ ‘ಎಗೆನೆಸ್ಟ್‌ ದಿ ಎಲೆಕ್ಷನ್‌’ ಪುಸ್ತಕದ ಸಂಗತಿಗಳನ್ನು ಉದಾಹರಿಸಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ, ‘ಕೃಷ್ಣ ಭಟ್‌ ಅವರು ಕಾರಣಾಂತರಗಳಿಂದ ತಮ್ಮ ಸೇವಾ ಅವಧಿಯಲ್ಲಿ ಬೇಗನೇ ಹೈಕೋರ್ಟ್‌ ನ್ಯಾಯಮೂರ್ತಿ ಪದನ್ನೋತಿ ಪಡೆಯಲಿಲ್ಲ. ಇದು ನ್ಯಾಯಾಂಗಕ್ಕೆ ಆದ ನಷ್ಟ’ ಎಂದರು.

ಹಿರಿಯ ವಕೀಲ ಉದಯ ಹೊಳ್ಳ ಅವರು ಮಾತನಾಡಿ, ‘ಕೃಷ್ಣ ಭಟ್‌ ಅವರ ಪ್ರಾಮಾಣಿಕತೆ ಮತ್ತು ವೃತ್ತಿನಿಷ್ಠೆ ಪ್ರಶ್ನಾತೀತ. ಆದರೂ ಇಂಥವರು ತಮ್ಮ ಸೇವಾ ಅವಧಿಯಲ್ಲಿ ಅನೇಕ ಸಂಕಟಗಳಿಗೆ ಈಡಾಗಿದ್ದರು. ಅತ್ಯುತ್ತಮ ಗುಣಗಳನ್ನು ಉಳ್ಳ ಇಂಥವರನ್ನು ಸರಿಯಾದ ಸಮಯದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿ ಮಾಡದೇ ಹೋದದ್ದು ಅನ್ಯಾಯ’ ಎಂದರು.

ಕಾರ್ಯಕ್ರಮದಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ, ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಮಾತನಾಡಿದರು. ಹಿರಿ–ಕಿರಿಯ ವಕೀಲರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.