ಪ್ರಜಾವಾಣಿ ವಾರ್ತೆ
ಬೆಂಗಳೂರು: ಜೈನ ಸಮುದಾಯದ ಅಭಿವೃದ್ಧಿಗಾಗಿ ಮಂಡಳಿ ಅಥವಾ ನಿಗಮ ರಚಿಸಬೇಕು ಎಂದು ಮುಖ್ಯಮಂತ್ರಿಯವರನ್ನು ಒತ್ತಾಯ ಮಾಡುತ್ತೇನೆ’ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ತಿಳಿಸಿದರು.
‘ಉತ್ತರ ಕರ್ನಾಟಕ ಜೈನ ಬಾಂಧವರು’ ಸಂಘಟನೆ ಮತ್ತು ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತು ಭಾನುವಾರ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮಾಚರಣೆಯಲ್ಲಿ ‘ಜನಮೆಚ್ಚಿದ ನಾಯಕ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ವಿವಿಧ ಸಮುದಾಯಗಳ ಅಭಿವೃದ್ಧಿಗೆ ನಿಗಮ, ಮಂಡಳಿಗಳನ್ನು ರಚಿಸಲಾಗಿದೆ. ಜೈನ ಸಮುದಾಯಕ್ಕೂ ಮಾಡಬೇಕು ಎಂಬುದು ಬಹುಕಾಲದ ಬೇಡಿಕೆ ಎಂದು ವಿವರಿಸಿದರು.
ಕರ್ನಾಟಕ ಜೈನ ಅಸೋಸಿಯೇಶನ್ ಅಧ್ಯಕ್ಷ ಬಿ. ಪ್ರಸನ್ನಯ್ಯ ಮಾತನಾಡಿ, ‘ಬೆಂಗಳೂರಿನಲ್ಲಿ ವಿದ್ಯಾರ್ಥಿನಿಲಯದ ಜೊತೆಗೆ, ಉದ್ಯೋಗಸ್ಥ ಮಹಿಳೆಯರಿಗಾಗಿ ವಸತಿ ನಿಲಯಗಳನ್ನು ತೆರೆಯುವ ಗುರಿ ಇದೆ ಎಂದು ತಿಳಿಸಿದರು.
ಭಾರತೀಯ ಜೈನ ಮಿಲನದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮಾತನಾಡಿ, ‘ಸಮುದಾಯದ ಜನರು ಒಟ್ಟಾಗಿ ಸೇರಿ ಚರ್ಚಿಸಲು ಸಂಘಟನೆ ಅಗತ್ಯ’ ಎಂದು ಪ್ರತಿಪಾದಿಸಿದರು.
ಉದ್ಯಮಿ ಸಭಾಶ ಜಿನಗೌಡ ಅಧ್ಯಕ್ಷತೆ ವಹಿಸಿದ್ದರು. ಕೆಜೆಎ ಮಾಜಿ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ಅವರಿಗೆ ಆದರ್ಶ ಜೈನ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಾವೀರ ಪಡನಾಡ, ಡಾ. ನೇಮಿನಾಥ ಮದ್ದಂ ಮತ್ತು ಬಿ. ಪ್ರಸನ್ನಯ್ಯ ಅವರಿಗೆ ‘ದಾನ ಚಿಂತಾಮಣಿ’ ಪ್ರಶಸ್ರಿ ನೀಡಿ ಸನ್ಮಾನಿಸಲಾಯಿತು. ಉತ್ತರ ಕರ್ನಾಟಕ ಜೈನ ಬಾಂಧವರು ಸಂಘಟನೆಯ ಉಪಾಧ್ಯಕ್ಷ ಶಾಂತಿನಾಥ ಹುದ್ದಾರ, ಕಾರ್ಯಾಧ್ಯಕ್ಷ ಅಜಿತ ಮುರುಗುಂಡೆ, ಕಾರ್ಯದರ್ಶಿ ಬಾಹುಬಲಿ ಗೌರಾಜ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.