ADVERTISEMENT

ಬನ್ನಂಜೆ ಅವರಿಗೆ ನುಡಿನಮನ ಸಲ್ಲಿಸಿದ ಒಡನಾಡಿಗಳು, ಆಪ್ತರು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 22:29 IST
Last Updated 21 ಫೆಬ್ರುವರಿ 2021, 22:29 IST
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನವು ಆಯೋಜಿಸಿದ್ದ ‘ಆಚಾರ್ಯ ಅಭಿಜ್ಞಾನ’ ಕಾರ್ಯಕ್ರಮದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಅವರ ಭಾವಚಿತ್ರಕ್ಕೆ ಕುಟುಂಬ ವರ್ಗದವರು ಆರತಿ ಬೆಳಗಿದರು. - ಪ್ರಜಾವಾಣಿ ಚಿತ್ರ
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನವು ಆಯೋಜಿಸಿದ್ದ ‘ಆಚಾರ್ಯ ಅಭಿಜ್ಞಾನ’ ಕಾರ್ಯಕ್ರಮದಲ್ಲಿ ಬನ್ನಂಜೆ ಗೋವಿಂದಾಚಾರ್ಯ ಅವರ ಭಾವಚಿತ್ರಕ್ಕೆ ಕುಟುಂಬ ವರ್ಗದವರು ಆರತಿ ಬೆಳಗಿದರು. - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬನ್ನಂಜೆ ಗೋವಿಂದಾಚಾರ್ಯರು ಆಧ್ಯಾತ್ಮಿಕ ಕ್ಷೇತ್ರದ ಆಲದ ಮರದಂತಿದ್ದರು. ಮಾಧ್ವ ತತ್ವದಲ್ಲಿ ಅದ್ವಿತೀಯ ಪಾಂಡಿತ್ಯ ಹೊಂದಿದ್ದ ಅವರು, ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆ ಅಚ್ಚಳಿಯದ ಕೊಡುಗೆ ನೀಡಿದ್ದಾರೆ. ಅವರು ನೀಡಿದ ಮಾರ್ಗದರ್ಶನಗಳು ಹಾಗೂ ಪ್ರವಚನಗಳು ಜೀವನದುದ್ದಕ್ಕೂ ನೆನಪಿನಲ್ಲಿ ಇರುವಂತಹವು’ ಎಂದು ಬನ್ನಂಜೆ ಗೋಂವಿದಾಚಾರ್ಯರ ಒಡನಾಡಿಗಳು ಹಾಗೂ ಆಪ್ತರು ಸ್ಮರಿಸಿದರು.

‌ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಆಯೋಜಿಸಿದ ‘ಆಚಾರ್ಯ ಅಭಿಜ್ಞಾನ’ ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಸ್. ನಾರಾಯಣ ಆಚಾರ್ಯ, ಲಕ್ಷ್ಮೀಶ ತೋಳ್ಪಾಡಿ, ಗುರುರಾಜ ಕರಜಗಿ, ಮಲ್ಲೇಪುರಂ ಜಿ. ವೆಂಕಟೇಶ್, ಎಚ್.ವಿ. ನಾಗರಾಜರಾವ್, ವಿದ್ಯಾಭೂಷಣ, ಡುಂಡಿರಾಜ್, ಗಂಜೀಫ ರಘುಪತಿ ಭಟ್, ಆರ್. ಗಣೇಶ್ ಮತ್ತು ವಿನಯಾ ಪ್ರಸಾದ್ ಅವರು ಗೋವಿಂದಾಚಾರ್ಯ ಅವರಿಗೆ ನುಡಿನಮನ ಸಲ್ಲಿಸಿದರು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಆಚಾರ್ಯರ ಕಾದಂಬರಿಗಳನ್ನು ಓದಿದರು. ಕವಿತಾ ಉಡುಪ ಅವರು ತಂದೆ ಗೋವಿಂದಾಚಾರ್ಯರು ರಚಿಸಿದ ಗೀತೆಗಳನ್ನು ಹಾಡಿದರು.

‘ಕೌಟುಂಬಿಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳಬಹುದು. ಆದರೆ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ಸತ್ಯ, ನಿಷ್ಠುರತೆ ಅತ್ಯಗತ್ಯ. ಬನ್ನಂಜೆ ಅವರು ಸತ್ಯಕ್ಕಾಗಿ ನಿಷ್ಠುರ ಬದುಕನ್ನು ನಡೆಸಿದರು. ಅವರು ಎಂದೂ ಓಲೈಕೆಯ ಮಾರ್ಗವನ್ನು ಅನುಸರಿಸಲಿಲ್ಲ. ಕೆಲವು ಸಂದರ್ಭದಲ್ಲಿ ಎಷ್ಟೇ ವಿರೋಧಗಳು ವ್ಯಕ್ತವಾದರೂ ತಾವು ನಂಬಿದ್ದ ಸತ್ಯವನ್ನು ಹೇಳಲು ಹಿಂದೇಟು ಹಾಕಲಿಲ್ಲ’ ಎಂದು ವಿದ್ಯಾಭೂಷಣರು ತಿಳಿಸಿದರು.

ADVERTISEMENT

ಮಲ್ಲೆಪುರಂ ಜಿ. ವೆಂಕಟೇಶ್, ‘ಸಂಸ್ಕೃತ ವಿಶ್ವವಿದ್ಯಾಲಯವನ್ನು ಹೇಗೆ ಕಟ್ಟಬೇಕು ಎಂಬ ಬಗ್ಗೆ ಬನ್ನಂಜೆ ಅವರು ಸಾಂಸ್ಕೃತಿಕ ದಿಗ್ದರ್ಶನ ಮಾಡಿಸಿದರು. ಒಂದು ವಿಶ್ವವಿದ್ಯಾಲಯದ ಹತ್ತಾರು ವಿದ್ವಾಂಸರು ಮಾಡಬೇಕಾದ ಕೆಲಸವನ್ನು ಅವರೊಬ್ಬರೇ ಮಾಡಿದ್ದಾರೆ. 2008ರ ಬಳಿಕ ಅವರು ನನ್ನ ಬದುಕಿಗೆ ಹತ್ತಿರವಾಗಿ, ಮಾರ್ಗದರ್ಶನ ಮಾಡಿದರು. ಅವರ ನೆನಪಿನ ಶಕ್ತಿ ಅದ್ಭುತ. ಮಹಾಭಾರತ ಅವರಿಗೆ ಕಂಠಪಾಠವಾಗಿತ್ತು. ವಿವಿಧ ಪರ್ವಗಳಲ್ಲಿ ಬರುವ ಸ್ತೋತ್ರಗಳ ವ್ಯಾಖ್ಯಾನವನ್ನು ಹೇಳುವುದನ್ನು ಕೇಳಿದರೆ ರೋಮಾಂಚನವಾಗುತ್ತಿತ್ತು’ ಎಂದರು.

ಕವಿ ಡುಂಡಿರಾಜ್, ‘ಗೋವಿಂದಾಚಾರ್ಯರು ಹೊಸ ಕವಿಗಳನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿದ್ದರು. ಅವರು ಬರೆದ ನಾಟಕದಲ್ಲಿ ಅಭಿನಯಿಸುವ ಅವಕಾಶವೂ ನನಗೊದಗಿತ್ತು. ಕವಿಗೋಷ್ಠಿಯೊಂದರಲ್ಲಿ ಅಧ್ಯಕ್ಷರಾಗಿದ್ದ ಅವರು, ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಅದನ್ನು ಸಾವಿರಾರು ಬಾರಿ ಟೇಪ್‌ರೆಕಾರ್ಡರ್ ಮೂಲಕ ಕೇಳಿದ್ದೆ. ನವ್ಯಕಾವ್ಯವನ್ನು ಸರಳವಾಗಿ ಪ್ರಾಸಬದ್ಧವಾಗಿ ಬರೆಯಲು ಸಾಧ್ಯ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದರು’ ಎಂದರು.

ಎಚ್‌.ವಿ. ನಾಗರಾಜ್ ರಾವ್, ‘ಬನ್ನಂಜೆ ಅವರ ಸಂಸ್ಕೃತ ಪಾಂಡಿತ್ಯಕ್ಕೆ ವಿದೇಶಿ ವಿದ್ವಾಂಸರೂ ಬೆರಗಾಗಿದ್ದರು. ಅವರ ಪ್ರವಚನದಿಂದ ಹಲವರು ಪ್ರಭಾವಿತರಾಗಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.