ADVERTISEMENT

ಪರಶುರಾಮನ ಕಂಚಿನ ಪ್ರತಿಮೆ ಪ್ರಕರಣ: ಶಿಲ್ಪ ಕಲಾವಿದ ಕೃಷ್ಣ ನಾಯ್ಕ ಬಂಧನಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 14:04 IST
Last Updated 23 ನವೆಂಬರ್ 2024, 14:04 IST
   

ಬೆಂಗಳೂರು: ಶಿಲ್ಪ ಕಲಾವಿದ ಕೃಷ್ಣ ನಾಯ್ಕ ಅವರ ಬಂಧನವನ್ನು ಇಲ್ಲಿ ನೆಲೆಸಿರುವ ಉತ್ತರ ಕನ್ನಡದ ಕಲಾವಿದರು ಖಂಡಿಸಿದ್ದು, ‘ಕಲಾ ಚಟುವಟಿಕೆಗಳಿಗೆ ಸಹಾಯ ಹಸ್ತ ನೀಡಬೇಕಾದ ಪ್ರಭುತ್ವ, ಕಲಾವಿದರನ್ನೇ ಶೋಷಣೆ ಮಾಡುವುದು ಸರಿಯಲ್ಲ’ ಎಂದಿದ್ದಾರೆ. 

‘ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಇಡಗುಂಜಿಯವರಾದ ಅವರು, ಕಲಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕಾರ್ಕಳ ತಾಲ್ಲೂಕಿನ ಉಮಿಕಲ್ ಬೆಟ್ಟದ ಮೇಲೆ ನಿರ್ಮಿಸಲಾಗಿದ್ದ ಪರಶುರಾಮನ ಕಂಚಿನ ಪ್ರತಿಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಗ್ದ ಕಲಾವಿದನನ್ನು ಬಂಧಿಸಿ, ಹಿಂಸೆ ನೀಡಲಾಗುತ್ತಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ’ ಎಂದು ಕಲಾವಿದರಾದ ಗಣಪತಿ ಎಸ್. ಹೆಗಡೆ, ಸದಾನಂದ ಹೆಗಡೆ ಹರಗಿ, ಗಣೇಶ ಧಾರೇಶ್ವರ, ರವಿ ಗುನಗ ಗೋಕರ್ಣ ಹಾಗೂ ರವಿ ಹುದ್ದಾರ್ ಬೇಸರ ವ್ಯಕ್ತಪಡಿಸಿದ್ದಾರೆ. 

‘ವೃತ್ತಿಪರ ಕಲಾವಿದರಾದ ಕೃಷ್ಣ ನಾಯ್ಕ, ಸಾವಿರಕ್ಕೂ ಹೆಚ್ಚು ಮ್ಯೂರಲ್ ಹಾಗೂ ನಾಲ್ಕೈದು ಸಾವಿರ ಶಿಲ್ಪ ಕಲಾಕೃತಿಗಳ ಯೋಜನೆಯನ್ನು ಪೂರ್ಣಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಸ್ಟುಡಿಯೊ ಸ್ಥಾಪಿಸಿ, ಕೆಲವರಿಗೆ ಉದ್ಯೋಗವನ್ನು ನೀಡಿದ್ದಾರೆ. ಅದಾವುದನ್ನೂ ಪರಿಗಣಿಸದೆ, ಪ್ರತಿಭಾವಂತ ಕಲಾವಿದನನ್ನು ಪಕ್ಷ ರಾಜಕೀಯಕ್ಕೆ ಬಲಿಪಶು ಮಾಡಲಾಗಿದೆ’ ಎಂದು ಜಂಟಿ ಪ್ರಕಟಣೆಯಲ್ಲಿ ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.