ಬೆಂಗಳೂರು: ‘ನ್ಯಾನೊ ತಂತ್ರಜ್ಞಾನದ ಮೂಲಕ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಬಳಕೆ ಮಾಡುವ ಉಪಕರಣಗಳನ್ನು ಅಭಿವೃದ್ಧಿ ಪಡಿಸಬಹುದಾಗಿದೆ' ಎಂದು ಏಷ್ಯನ್ ಕಾಂಕ್ರೀಟ್ ಫೆಡರೇಷನ್ ಉಪಾಧ್ಯಕ್ಷ ಡಾ.ಮನಮೋಹನ್ ಆರ್. ಕಲ್‍ಗಾಲ್ ಹೇಳಿದರು.
ರಾಜ್ಯ ಒಕ್ಕಲಿಗರ ಸಂಘ ಮತ್ತು ಬೆಂಗಳೂರು ತಾಂತ್ರಿಕ ಮಹಾ ವಿದ್ಯಾಲಯ(ಬಿಐಟಿ) ಆಯೋಜಿಸಿದ್ದ ಎಂಜಿನಿಯರಿಂಗ್ ಮತ್ತು ನಿರ್ವಹಣಾ ಬಳಕೆಗೆ ಅಗತ್ಯವಿರುವ ಅತ್ಯಾಧುನಿಕ ಉಪಕರಣಗಳ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
’ಬೇರೆ ಬೇರೆ ಹಿನ್ನೆಲೆಯಿಂದ ಬರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉಪಯೋಗಿಸುವ ಅತ್ಯಾಧುನಿಕ ಉಪಕರಣಗಳ ಮಹತ್ವ ಕುರಿತು ತರಬೇತಿ ನೀಡುವ ಅಗತ್ಯವಿದೆ’ ಎಂದು ತಿಳಿಸಿದರು.
‘ಇತ್ತೀಚಿನ ದಿನಗಳಲ್ಲಿ ಎಂಜಿನಿಯರಿಂಗ್ ವಿಭಾಗದ ಅತ್ಯಾಧುನಿಕ ಉಪಕರಣಗಳ ಕುರಿತಂತೆ ಭಾರಿ ನಿರೀಕ್ಷೆಗಳಿವೆ. ಅವುಗಳನ್ನು ಸರಿದೂಗಿಸುವ ಮಟ್ಟಕ್ಕೆ ಸಂಶೋಧನೆ ಮಾಡುವ ಅಗತ್ಯ ಇದೆ’ ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಎಕ್ಸೆಲೆನ್ಸ್ ಇನ್ ಹೈಪರ್‍ಸಾನಿಕ್‍ನ ಅಧ್ಯಕ್ಷ ಪ್ರೊ.ಜಿ.ಜಗದೀಶ್ ಮಾತನಾಡಿ, ‘ಪ್ರಕೃತಿ ಜತೆಗೆ ನಾವು ಕಲಿಯಬೇಕು. ನ್ಯಾನೊ ತಂತ್ರಜ್ಞಾನದ ರಚನಾತ್ಮಕ ಪ್ರಕ್ರಿಯೆ ಕುರಿತು ಅಧ್ಯಯನ ನಡೆಸಬೇಕಾಗಿದೆ. ಈ ಮೂಲಕ ಅದ್ಭುತ ಸಾಧನೆಗಳನ್ನು ಮಾಡಬಹುದು’ ಎಂದು ಹೇಳಿದರು.
ಬಿಐಟಿ ಅಧ್ಯಕ್ಷ ಎಂ.ಪುಟ್ಟಸ್ವಾಮಿ ಮಾತನಾಡಿ, ‘ಪ್ರಾಧ್ಯಾಪಕರು ಬೋಧನೆಗೆ ಸೀಮಿತವಾಗದೇ ವಿದ್ಯಾರ್ಥಿಗಳನ್ನು ಸಂಶೋಧನೆಗೆ ಅಣಿಗೊಳಿಸಬೇಕು. ಮೌಲ್ಯಯುತ ಶಿಕ್ಷಣ ನೀಡಿದಾಗ ಮಾತ್ರ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಎನ್‍ಎಎಲ್‍ನ ಹಿರಿಯ ವಿಜ್ಞಾನಿ ಡಾ.ಕೆ. ವೆಂಕಟೇಶ್ವರಲು ಮಾತನಾಡಿದರು. ರಾಜ್ಯ ಒಕ್ಕಲಿಗರ ಸಂಘದ ಸಹಾಯಕ ಕಾರ್ಯದರ್ಶಿ ರಾಘವೇಂದ್ರ, ನಿರ್ದೇಶಕ ಲೋಕೇಶ್ ನಾಗರಾಜಯ್ಯ, ಬಿಐಟಿಯ ಪ್ರಾಂಶುಪಾಲ ಡಾ.ಎಂ.ಯು. ಅಶ್ವತ್ಥ್, ಉಪ ಪ್ರಾಂಶುಪಾಲ ಡಾ.ಜೆ. ಪ್ರಕಾಶ್, ಡೀನ್‌ಗಳಾದ ಡಾ.ಕೆ.ಎಂ. ರೂಪಾ, ಡಾ.ಎಚ್.ಬಿ. ಬಾಲಕೃಷ್ಣ, ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಶ್ರೀರಾಮರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.