ನೆಲಮಂಗಲ: ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ. ಕೆ.ಸುಧಾಕರ್ ಅವರ ಅಭಿನಂದನೆಯ ಹೆಸರಿನಲ್ಲಿ ಭಾನುವಾರ ಇಲ್ಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮದ್ಯದ ಹೊಳೆಯೇ ಹರಿದಿರುವುದನ್ನು ತೋರಿಸುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆಯೋಜಕರು, ಪೊಲೀಸರು, ಬೌನ್ಸರ್‌ಗಳ ಭದ್ರತೆಯಲ್ಲಿ ವಿತರಿಸಿದ ಮದ್ಯ ಕುಡಿದು ಸಮಾರಂಭಕ್ಕೆ ಬಂದಿದ್ದ ಜನ ನಶೆಯಲ್ಲಿ ತೇಲಾಡಿದರು.
ವಿಡಿಯೊದಲ್ಲಿರುವ ದೃಶ್ಯಗಳ ಪ್ರಕಾರ, ನೆಲಮಂಗಲ ತಾಲ್ಲೂಕಿನ ಬಾವಿಕೆರೆಯ ಮೈದಾನದಲ್ಲಿ ಬಿಜೆಪಿ–ಜೆಡಿಎಸ್ ನಾಯಕರು ಆಯೋಜಿಸಿದ್ದ ‘ಮೈತ್ರಿ ಹಬ್ಬ’ ಮದ್ಯ ‘ಸಮಾರಾಧನೆ’ಯ ಸಮಾರಂಭವಾಗಿ ಪರಿವರ್ತನೆಗೊಂಡಿತ್ತು. ಜನರು ಸರದಿಯಲ್ಲಿ ನಿಂತು ಮದ್ಯ ಸ್ವೀಕರಿಸುವಾಗ ಯಾವುದೇ ಗೊಂದಲ, ಗಲಾಟೆಗಳಾಗದಂತೆ ನೋಡಿಕೊಳ್ಳಲು ಬೌನ್ಸರ್‌ಗಳಿದ್ದರು. ‘ಕಾನೂನು ಸುವ್ಯವಸ್ಥೆ’ ಕಾಪಾಡಲು ಮತ್ತು ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರೂ ಕ್ರಮ ವಹಿಸಿದರು. ಎರಡು ಟ್ರಕ್ ಮದ್ಯ ಕೆಲವೇ ಗಂಟೆಗಳಲ್ಲಿ ಖಾಲಿಯಾಯಿತು.
ಪಟ್ಟಣದ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸಂಸದ ಡಾ. ಸುಧಾಕರ್ ಅವರನ್ನು ತೆರೆದ ವಾಹನದಲ್ಲಿ ಮತ್ತು ಬೈಕ್ ರ‍್ಯಾಲಿ ಮೂಲಕ ಬಾವಿಕೆರೆಯ ಮೈದಾನಕ್ಕೆ ಕರೆತರಲಾಯಿತು. ಅಲ್ಲಿ ಅಭಿನಂದನಾ ಕಾರ್ಯಕ್ರಮ ನಡೆದ ಬಳಿಕ ಮದ್ಯ ಹಂಚಿಕೆ, ಬಾಡೂಟ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್ ಚೌಧರಿ, ಜೆಡಿಎಸ್ ಮಾಜಿ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಈ ಕಾರ್ಯಕ್ರಮ ಆಯೋಜಿಸಿದ್ದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಸೇರಿದಂತೆ ಬಿಜೆಪಿ, ಜೆಡಿಎಸ್‌ನ ಹಲವು ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮದ್ಯದ ಬಾಟಲಿಗಾಗಿ ಜನರು ಮುಗಿಬಿದ್ದಾಗ ನೂಕುನುಗ್ಗಲು ಉಂಟಾಗುವುದನ್ನು ತಡೆಯಲು ಕಬ್ಬಿಣದ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಬಿಯರ್ ಪ್ರಿಯರಿಗೆ ಬಾಟಲಿಗಟ್ಟಲೆ ಬಿಯರ್ ನೀಡಿದರೆ, ವಿಸ್ಕಿ, ಬ್ರಾಂದಿ ಕುಡಿಯುವವರಿಗೆ ಮದ್ಯದ ಟೆಟ್ರಾ ಪ್ಯಾಕ್ ಜತೆ ಒಂದು ಲೋಟ ನೀರನ್ನೂ ವಿತರಿಸಲಾಯಿತು. ಎರಡು ಪ್ಯಾಕ್ ಕೇಳಿದವರನ್ನು ಬೌನ್ಸರ್‌ಗಳು ದಬಾಯಿಸಿ ಕಳುಹಿಸಿದರು. ಮದ್ಯ ಪಡೆದವರು ಅಲ್ಲಿಯೇ ನಿಲ್ಲದಂತೆ ನಿಯಂತ್ರಿಸಲು ‘ಬೇಗ ಬೇಗ ಹೋಗಿ’ ಎಂದು ಪೊಲಿಸರು ಎಲ್ಲರನ್ನೂ ಮುಂದಕ್ಕೆ ತಳ್ಳುತ್ತಿದ್ದರು.
ಮದ್ಯದ ಜತೆಗೆ ಬಿರಿಯಾನಿ, ಕಬಾಬ್, ಕುರಿ ಮಾಂಸದ ಖಾದ್ಯಗಳ ವ್ಯವಸ್ಥೆಯೂ ಇತ್ತು. ಬಿಯರ್, ವಿಸ್ಕಿ ಪಡೆದವರು ಆಹಾರ ಪೂರೈಕೆ ಕೌಂಟರ್‌ನತ್ತ ತೆರಳುತ್ತಿದ್ದರು. ಊಟದ ತಟ್ಟೆಯೊಂದಿಗೆ ಮೈದಾನದ ಮೂಲೆ ಮೂಲೆಯಲ್ಲಿ ಕುಳಿತು ಮದ್ಯ ಕುಡಿದರು. ಮೈದಾನದಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ಮದ್ಯ ಸಮಾರಾಧನೆಯೇ ಕಾಣುತ್ತಿತ್ತು.
ಸರದಿಯಲ್ಲಿ ನಿಂತವರಲ್ಲಿ ಕೆಲವರು ಸಂಘಟಕರಿಗೆ ಜಯಕಾರ ಹಾಕಿದರು. ಕೆಲವರು ‘ಮೋದಿ ಅಣ್ಣನಿಗೆ ಜೈ’ ಎಂದು ಕೂಗಿದರು. ಐದು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಚಿಕ್ಕಬಳ್ಳಾಪುರ ಸಂಸದ ಡಾ.ಸುಧಾಕರ ಅವರ ಸನ್ಮಾನ ಕಾರ್ಯಕ್ರಮ ಉದ್ಘಾಟನೆ ಆದ ತಕ್ಷಣ ಅಲ್ಲಿಂದ ಬೇರೆ ಕಾರ್ಯಕ್ರಮಕ್ಕೆ ಹೊರಟೆ. ಮುಂದೆ ಅಲ್ಲಿ ಏನು ನಡೆಯಿತು ಗೊತ್ತಿಲ್ಲ. ಜೆಡಿಎಸ್‌ನಿಂದ ಸಂಸದರಿಗೆ ಸನ್ಮಾನ ಇಟ್ಟುಕೊಳ್ಳಲಾಗಿತ್ತು. ಕುಡಿತಕ್ಕೆ ಬಿಜೆಪಿ ಯಾವುದೇ ಕಾರಣಕ್ಕೂ ಪ್ರೋತ್ಸಾಹ ನೀಡುವುದಿಲ್ಲ-ಆರ್.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
ಕಾರ್ಯಕ್ರಮದಲ್ಲಿ ಊಟ ಹಾಕುವುದರಲ್ಲಿ ತಪ್ಪೇನಿಲ್ಲ. ನಮ್ಮನ್ನು ಕಾರ್ಯಕ್ರಮಕ್ಕೆ ಕರೆದಿದ್ದರು ಹೋದೆವು, ಬಂದೆವು. ನಂತರ ಏನಾಗಿದೆ ಎನ್ನುವ ಬಗ್ಗೆ ನನಗೆ ಗೊತ್ತಿಲ್ಲಡಾ.ಕೆ.ಸುಧಾಕರ್, ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.