ಬೆಂಗಳೂರು: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ವಿಮ್ಸ್) ವಿದ್ಯುತ್ ಕೈಕೊಟ್ಟು, ಜನರೇಟರ್ ಕೆಲಸ ಮಾಡದೆ, ತೀವ್ರ ನಿಗಾ ಘಟಕದಲ್ಲಿದ್ದ ಮೂವರು ರೋಗಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಪೋಸ್ಟ್ ಪ್ರಕಟಿಸಲಾಗಿದೆ. ’ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಅಭಾವದಿಂದ ವೆಂಟಿಲೇಟರ್‌ನಲ್ಲಿದ್ದ ರೋಗಿಗಳ ಸಾವಿಗೀಡಾಗಿರುವುದು ಬಿಜೆಪಿ ಸರ್ಕಾರ ಮಾಡಿದ ಕೊಲೆ‘ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆಯೂ ಇರಲಿಲ್ಲವೇ? ಆರೋಗ್ಯ ಸಚಿವ ಸುಧಾಕರ್ ಎಂಬ ಅಸಮರ್ಥ ಸಚಿವರ ಕೈಯ್ಯಲ್ಲಿ ರಾಜ್ಯದ ಆರೋಗ್ಯ ವ್ಯವಸ್ಥೆ ಅನಾರೋಗ್ಯ ಪೀಡಿತವಾಗಿರುವುದು ಕೋವಿಡ್ ಕಾಲದಿಂದಲೂ ಸಾಬೀತಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ವಿಮ್ಸ್‌ನಲ್ಲಿ ಬುಧವಾರ ಬೆಳಗ್ಗೆ ಮೌಲಾ ಹುಸೇನ್, ಚಿಟ್ಟೆಮ್ಮ ಹಾಗೂ ಚಂದ್ರಮ್ಮ ಎಂಬುವವರು ಮೃತಪಟ್ಟಿದ್ದರು. 'ಕರೆಂಟ್ ಕೈಕೊಟ್ಟಿದ್ದಕ್ಕೂ ಸಾವಿಗೂ ಸಂಬಂಧವಿಲ್ಲ’ ಎಂದು ವಿಮ್ಸ್ ಮೂಲಗಳು ತಿಳಿಸಿವೆ. ಆದರೆ, ವಿದ್ಯುತ್ ಇಲ್ಲದೇ, ವೆಂಟಿಲೇಟರ್ ಸ್ಥಗಿತಗೊಂಡು ರೋಗಿಗಳು ಮೃತಪಟ್ಟಿದ್ದಾರೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.