ಬೆಂಗಳೂರು: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ಕಿತ್ತುಕೊಂಡಿದ್ದಾರೆ ಎಂದುವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ, ‘ಮೋದಿ ಆಧುನಿಕ ಭಸ್ಮಾಸುರ’ ಎಂದು ಟೀಕಿಸಿದ್ದಾರೆ.
‘ಮೋದಿ ಅವರು ಪ್ರಜಾಪ್ರಭುತ್ವವನ್ನು ಭಸ್ಮಮಾಡಲು ಹೊರಟಿದ್ದಾರೆ. ರಾಜ್ಯಪಾಲರನ್ನು ಬಿಜೆಪಿ ಏಜೆಂಟರಂತೆ ನಡೆಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಆಡಳಿತ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಆರೋಪಿಸಿದರು.
‘ಸರ್ಕಾರ ರಚಿಸಲು ಶಿವಸೇನೆಗೆ ಸಮಯ ನೀಡಿಲ್ಲ. ಎನ್‌ಸಿಪಿಗೂ ಅವಕಾಶ ಕೊಡದೆ ರಾಷ್ಟ್ರಪತಿ ಆಡಳಿತ ಜಾರಿಮಾಡಲಾಗಿದೆ. ಇದೆಲ್ಲವೂ ಮೋದಿ ತಂತ್ರಗಾರಿಕೆಯಿಂದ ನಡೆದಿದೆ. ಕೇಂದ್ರದ ಬಿಜೆಪಿ ನಾಯಕರು ಎಲ್ಲೆಡೆ ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಪ್ರಜಾಪ್ರಭುತ್ವದ ಕಗ್ಗೊಲೆ ನಡೆದಿದೆ’ ಎಂದು ದೂರಿದರು.
ಆದಾಯ ತೆರಿಗೆ ಇಲಾಖೆ, ಸಿಬಿಐ, ಜಾರಿ ನಿರ್ದೇಶನಾಲಯವನ್ನು ಭಸ್ಮಮಾಡಿದ್ದು, ಈಗ ರಾಜ್ಯಪಾಲರ ಸ್ಥಾನಮಾನ ಸಹ ಭಸ್ಮಮಾಡಲಾಗಿದೆ. ಇದೆಲ್ಲವನ್ನೂ ಸುಪ್ರೀಂ ಕೋರ್ಟ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಕಾಲದಲ್ಲಿ ಸ್ಪಂದಿಸಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.