ಬೆಂಗಳೂರು: ಟಿಪ್ಪು ಸುಲ್ತಾನನ ಕುರಿತು ಸರಿಯಾದ ಮಾಹಿತಿ ಹೊಂದಿಲ್ಲದ ಬಿಜೆಪಿ ನಾಯಕರು ಅಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪ್ರೊ.ಬಿ.ಕೆ.ಚಂದ್ರಶೇಖರ್ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ ಇತ್ತೀಚೆಗೆ ಹೇಳಿಕೆ ನೀಡಿ, ಬ್ರಿಟಿಷರ ವಿರುದ್ಧ ಸೋತಿದ್ದ ಟಿಪ್ಪು ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒಪ್ಪಿಸಿ ಯದ್ಧದಿಂದ ಓಡಿ ಹೋದ ಹೇಡಿ ಎಂದು ಹೇಳಿದ್ದಾರೆ. ಈ ಅಂಶವನ್ನು ಅಶೋಕ ಅವರ ಯಾವ ಸಂಶೋಧನೆಯಿಂದ ಕಂಡುಕೊಂಡಿದ್ದಾರೆ ಎಂಬುದನ್ನು ಹೇಳಬೇಕು ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
‘1792–93 ರ ಮೂರನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬಹುಪಾಲು ಹಿನ್ನಡೆ ಅನುಭವಿಸಿದ್ದ ಟಿಪ್ಪು, ಬ್ರಿಟಿಷರು ಅನುಭವಿಸಿದ್ದ ನಷ್ಟವನ್ನು ತುಂಬಿಕೊಡಲು ಯುದ್ಧ ದಂಡವಾಗಿ ₹3 ಕೋಟಿ ತೆರಬೇಕಾಯಿತು. ಅದನ್ನು ತೀರಿಸುವವರೆಗೂ ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಲ್ಲಿ ಒತ್ತೆ ಇಡಲು ಒಪ್ಪಬೇಕಾಯಿತು’ ಎಂದಿದ್ದಾರೆ.
ಆದರೂ ಟಿಪ್ಪು ಶ್ರೀರಂಗಪಟ್ಟಣದಲ್ಲೇ ಉಳಿದುಕೊಂಡು ಬ್ರಿಟಿಷರ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಮರಾಠಾ ನಾಯಕರು ಮತ್ತು ಹೈದರಾಬಾದಿನ ನಿಜಾಮರ ವಿರುದ್ಧ ಮತ್ತೊಮ್ಮೆ ಯುದ್ಧ ಹೂಡಿ, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಶ್ರೀರಂಗಪಟ್ಟಣದ ಕೋಟೆಯೊಳಗೆ ಕಟ್ಟಕಡೆಯವರೆಗೆ ಏಕಾಂಗಿಯಾಗಿ ಹೋರಾಡಿ ಯುದ್ಧ ಭೂಮಿಯಲ್ಲಿ ವೀರಮರಣ ಹೊಂದಿದ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.