ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಕೊನೆಯ ದಿನವಾದ ಗುರುವಾರವೂ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ನಗರಕ್ಕೆ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಜೊತೆ ಹೆಜ್ಜೆ ಹಾಕಿ ಪಾದಯಾತ್ರೆಗೆ ಶಕ್ತಿ ತುಂಬಿದರು. ‘ನಮ್ಮ ನೀರು, ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ‘ಮೇಕೆದಾಟು’ ಕೂಗು ರಸ್ತೆಯುದ್ದಕ್ಕೂ ಜೋರಾಗಿತ್ತು.
ನಗರದ ಬಳ್ಳಾರಿ ರಸ್ತೆಯ ಅರಮನೆ ಮೈದಾನದಿಂದ ಆರಂಭವಾದ ಪಾದಯಾತ್ರೆ, ಬಸವನಗುಡಿ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಸಮಾಪ್ತಿಗೊಂಡಿತು. ಪಾದಯಾತ್ರೆ ಸಾಗುತ್ತಿದ್ದ ರಸ್ತೆಗಳು, ಕಾರ್ಯಕರ್ತರಿಂದ ತುಂಬಿದ್ದವು. ಕಾಂಗ್ರೆಸ್ ಬಾವುಟ, ರಾಷ್ಟ್ರ
ಧ್ವಜ ಹಿಡಿದ ಕಾರ್ಯಕರ್ತರು, ಉತ್ಸಾಹದಿಂದ ಪಾದಯಾತ್ರೆಯಲ್ಲಿ ಸಾಗಿದರು. ರಸ್ತೆಯುದ್ದಕ್ಕೂ ಹಾಕಿದ್ದ ಬೃಹತ್ ಕಟೌಟ್
ಗಳು, ಬಾವುಟಗಳು, ಮುಖಂಡರು ಹಾಗೂ ಕಾರ್ಯಕರ್ತರನ್ನು ಸ್ವಾಗತಿಸಿದವು.
ಕಾವೇರಿ ಚಿತ್ರಮಂದಿರ ಜಂಕ್ಷನ್, ಭಾಷ್ಯಂ ವೃತ್ತ, ಮಲ್ಲೇಶ್ವರ 18ನೇ ಅಡ್ಡರಸ್ತೆ, ಮಾರ್ಗೋಸಾ ರಸ್ತೆ, ಕೆ.ಸಿ. ಜನರಲ್ ಆಸ್ಪತ್ರೆ, ಮಲ್ಲೇಶ್ವರ ಜೋಡು ರಸ್ತೆ, ಶೇಷಾದ್ರಿಪುರ ರೈಲ್ವೆ ಫ್ಲಾಟ್‌ಫಾರಂ ರಸ್ತೆ, ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವೃತ್ತ, ಕಾಟನ್ ಪೇಟೆ ಮುಖ್ಯರಸ್ತೆ, ಬ್ರಿಯಾಂಡ್ ವೃತ್ತ, ರಾಯನ್ ವೃತ್ತ ಹಾಗೂ ಈದ್ಗಾ ಮೈದಾನದ ಮೂಲಕ ಪಾದಯಾತ್ರೆ ಸಾಗಿತು. ರಸ್ತೆಯುದ್ದಕ್ಕೂ ಪ್ರಮುಖ ವ್ಯಕ್ತಿಗಳ ಪ್ರತಿಮೆಗಳಿಗೆ ಮುಖಂಡರು ಮಾಲಾರ್ಪಣೆ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಮುಖಂಡರು ಪಾದಯಾತ್ರೆ ನೇತೃತ್ವ ವಹಿಸಿದ್ದರು. ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಕಂಡುಬಂತು.ರಸ್ತೆ ಪಕ್ಕದಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡಿದ್ದ ಕಾರ್ಯಕರ್ತರು, ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರಿಗಾಗಿ ನೀರು,ಜ್ಯೂಸ್ ವ್ಯವಸ್ಥೆ ಮಾಡಿದ್ದರು. ಕೆಲವೆಡೆ ಉಪಾಹಾರ ವ್ಯವಸ್ಥೆಯೂ ಇತ್ತು.
ಬಿಜೆಪಿ ಕಚೇರಿಗೆ ಬಿಗಿ ಭದ್ರತೆ
ಮಲ್ಲೇಶ್ವರದಲ್ಲಿ ಪಾದಯಾತ್ರೆ ಸಾಗುತ್ತಿದ್ದ ವೇಳೆ ಬಿಜೆಪಿ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಚೇರಿಗೆ ಹೋಗುವ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಕೆಲ ಹೊತ್ತು ನಿರ್ಬಂಧಿಸಲಾಗಿತ್ತು.
ಕಾಂಗ್ರೆಸ್ ಮುಖಂಡನ ಜೇಬಿಗೆ ಕತ್ತರಿ
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡ ಆನಂದ್‌ಕುಮಾರ್ ಜೇಬಿನಲ್ಲಿದ್ದ ಪರ್ಸ್ ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಸದಾಶಿವನಗರ ಠಾಣೆಗೆ ಆನಂದ್‌ಕುಮಾರ್ ದೂರು ನೀಡಿದ್ದಾರೆ.
‘ಅರಮನೆ ಮೈದಾನದಿಂದ ಪಾದಯಾತ್ರೆ ಆರಂಭವಾಗಿತ್ತು. ಯಾರೋ ದುಷ್ಕರ್ಮಿಗಳು, ನನ್ನ ಜೇಬನ್ನು ಬ್ಲೇಡ್‌ನಿಂದ ಕತ್ತರಿಸಿ ಕಳ್ಳತನ ಮಾಡಿದ್ದಾರೆ. ಪರ್ಸ್, ₹ 68 ಸಾವಿರ ನಗದು ಹಾಗೂ ಕ್ರೆಡಿಟ್ ಕಾರ್ಡ್ ಕಳ್ಳತನ ಆಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.