ADVERTISEMENT

ದಿನಸಿ ಕಿಟ್ ಖರೀದಿಯಲ್ಲಿ ಅಕ್ರಮ: ಆರೋಪ

ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮೇ 2020, 20:10 IST
Last Updated 28 ಮೇ 2020, 20:10 IST
ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥರೆಡ್ಡಿ ಮತ್ತು ಅಬ್ದುಲ್ ವಾಜೀದ್ ಮಾತನಾಡಿದರು – ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥರೆಡ್ಡಿ ಮತ್ತು ಅಬ್ದುಲ್ ವಾಜೀದ್ ಮಾತನಾಡಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಲಸೆ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆಗೆ ಬಿಬಿಎಂಪಿ ₹19.39 ಖರ್ಚು ಮಾಡಿದ್ದು, ಇದರಲ್ಲಿ ಅವ್ಯವಹಾರ ನಡೆದಿದೆ’ ಎಂದು ಆರೋಪಿಸಿ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಕೌನ್ಸಿಲ್ ಸಭೆಯಲ್ಲಿ ಮತ್ತು ಸಭಾಂಗಣದ ಹೊರಗೆ ಗುರುವಾರ ಪ್ರತಿಭಟನೆ ನಡೆಸಿದರು. ಈ ವಿಚಾರ ಸಭೆಯಲ್ಲಿ ವಾಕ್ಸಮರಕ್ಕೆ ಕಾರಣವಾಯಿತು.

ಸಭೆ ಆರಂಭಕ್ಕೂ ಮುನ್ನ ಪೌರ ಸಭಾಂಗಣದ ಹೊರಗಿನ ಮೆಟ್ಟಿಲುಗಳ ಮೇಲೆ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು,‍ಪಾಲಿಕೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಫಲಕಗಳನ್ನು ಹಿಡಿದು ಸಭೆಯ ಒಳಕ್ಕೂ ಬಂದ ಸದಸ್ಯರು, ಘೋಷಣೆ ಕೂಗಿದರು. ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ‘3.99 ಲಕ್ಷ ಜನರಿಗೆ ದಿನಸಿ ಕಿಟ್ ವಿತರಣೆ ಮಾಡಲಾಗಿದೆ ಎಂದು ಪಾಲಿಕೆ ದಾಖಲೆಗಳು ಹೇಳುತ್ತಿವೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ವಾರ್ಡ್‌ಗಳಲ್ಲಿ ಒಂದೇ ಒಂದು ಕಿಟ್ ವಿತರಿಸಿಲ್ಲ. ಬಿಜೆಪಿ ಸದಸ್ಯರ ವಾರ್ಡ್‌ಗಳಲ್ಲೂ ವಿತರಣೆ ಆದಂತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಅಕ್ಷಯಪಾತ್ರ ಫೌಂಡೇಷನ್‌, ಆಹಾರ ಇಲಾಖೆ, ಶ್ರೀ ಶಿವಶಕ್ತಿ ಟ್ರೇಡರ್ಸ್‌ ಸೇರಿ ಹಲವು ಏಜೆನ್ಸಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಅಲ್ಲಿ ತಯಾರಾದ ಕಿಟ್‌ಗಳನ್ನು ಎಲ್ಲಿ ವಿತರಣೆ ಮಾಡಲಾಯಿತು ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಇದೊಂದು ದೊಡ್ಡ ಹಗರಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯರಾದ ಮಂಜುನಾಥರೆಡ್ಡಿ ಮತ್ತು ಶಿವರಾಜ್, ‘ಬಿಬಿಎಂಪಿಯಿಂದಲೇ ಇಷ್ಟೊಂದು ಪ್ರಮಾಣದ ಕಿಟ್‌ಗಳನ್ನು ವಿತರಿಸಿದ್ದರೆ ಅವು ಎಲ್ಲಿ ಹೋದವು‘ ಎಂದು ಪ್ರಶ್ನಿಸಿದರು.

‘ಹಗರಣ ಎಂಬ ಪದವನ್ನು ಕಡತದಿಂದ ತೆಗೆದು ಹಾಕಬೇಕು. ಯಾರಿಗೆ ಕಿಟ್ ವಿತರಣೆ ಮಾಡಲಾಗಿದೆ ಎಂಬುದನ್ನು ಆಯುಕ್ತರು ತಿಳಿಸಲಿದ್ದಾರೆ’ ಎಂದು ಬಿಜೆಪಿ ಸದಸ್ಯ ಪದ್ಮನಾಭರೆಡ್ಡಿ ಹೇಳಿದರು.

ಮೇಯರ್ ಎಂ. ಗೌತಮ್‌ಕುಮಾರ್, ‘ಹಗರಣ ನಡೆದಿದೆ ಎಂದು ಏಕಾಏಕಿ ಆರೋಪಿಸುವುದು ಸರಿಯಲ್ಲ’ ಎಂದರು.

ಸರ್ಕಾರಕ್ಕೆ ಕೀರ್ತಿ ತಂದಿದ್ದೇವೆ: ಆಯುಕ್ತ

‘ಕಿಟ್ ವಿತರಣೆಯಲ್ಲಿ ಅವ್ಯವಹಾರ ನಡೆದಿಲ್ಲ. ವಲಸೆ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಸೇರಿದಂತೆ ಅವರಿಗೆ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸುವ ಮೂಲಕ ಸರ್ಕಾರಕ್ಕೆ ಕೀರ್ತಿ ತರುವ ಕೆಲಸವನ್ನು ಮಾಡಿದ್ದೇವೆ’ ಎಂದು ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಹೇಳಿದರು.

ಮೊದಲ ಹಂತದಲ್ಲಿ 1.44 ಲಕ್ಷ ಕಾರ್ಮಿಕರನ್ನು ಗುರುತಿಸಿ ಕಿಟ್ ವಿತರಿಸಲಾಯಿತು. ಪ್ರತಿ ಕಿಟ್‌ಗೆ ₹741 ಭರಿಸಲಾಗಿದೆ. ಕಡಿಮೆ ದರದಲ್ಲಿ ಅಕ್ಕಿ ಸಿಗಲಿದೆ ಎಂಬ ಕಾರಣಕ್ಕೆ ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ನೇರವಾಗಿ ಖರೀದಿಸಲಾಯಿತು. ಉಳಿದ ಪದಾರ್ಥಗಳನ್ನು ಸೇರಿಸಿ ಕಿಟ್‌ ತಯಾರಿಸುವ ಜವಾಬ್ದಾರಿಯನ್ನು ಅಕ್ಷಯಪಾತ್ರ ಫೌಂಡೇಷನ್, ಮೆಟ್ರೊ ಕ್ಯಾಷ್ ಆ್ಯಂಡ್ ಕ್ಯಾರಿ, ಶ್ರೀ ಶಿವಶಕ್ತಿ ಟ್ರೇಡರ್ಸ್‌ಗೆ ವಹಿಸಲಾಯಿತು’ ಎಂದು ಮಾಹಿತಿ ನೀಡಿದರು.

‘ಬೇರೆ ರಾಜ್ಯಗಳ ದೊಡ್ಡ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರಿದ್ದರು. ಅವರಿಗೆ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಬೀದಿಗೆ ಇಳಿಯುವ ಸಾಧ್ಯತೆ ಇತ್ತು. ಆಗ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿತ್ತು. ಒಂದೇ ಒಂದು ಗುಂಪು ಸಹ ತೊಂದರೆ ಅನುಭವಿಸದಂತೆ ನೋಡಿಕೊಂಡಿದ್ದೇವೆ’ ಎಂದು ಸಮಜಾಯಿಷಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.