ಬೆಂಗಳೂರು: ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ಗುರುವಾರ ನಡೆಸಿದ ದಾಳಿಯನ್ನು ಖಂಡಿಸಿ ಜೆಡಿಎಸ್– ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರವೇ ಬೀದಿಗಿಳಿದು ಪ್ರತಿಭಟನೆ ನಡೆಸಿತು.
ಕಬ್ಬನ್ ಪಾರ್ಕ್ ಬಳಿ ಇರುವ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು, ಕೇಂದ್ರ ಸರ್ಕಾರ ಹಾಗೂ ತೆರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಪಕ್ಷಗಳ ಧ್ವಜ ಹಿಡಿದಿದ್ದ ಕಾರ್ಯಕರ್ತರು, ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಅದೇ ವೇಳೆ ಪೊಲೀಸರ ಜೊತೆ ಮಾತಿನ ಚಕಮಕಿ ನಡೆಯಿತು. ಕೆಲ ಕಾರ್ಯಕರ್ತರು, ರಸ್ತೆಯಲ್ಲಿದ್ದ ಬ್ಯಾರಿಕೇಡ್‌ಗಳನ್ನು ಹಾರಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ‘ಬಿಜೆಪಿಯವರು ಹಾಗೂ ಐ.ಟಿ ಅಧಿಕಾರಿಗಳೇನು ಹರಿಶ್ಚಂದ್ರನ ಮಕ್ಕಳಾ? ನೀವೆಲ್ಲ ದೇವಲೋಕದಿಂದ ಇಳಿದು ಬಂದಿದ್ದೀರಾ? ಚುನಾವಣೆ ಸಂದರ್ಭದಲ್ಲಿ ದಬ್ಬಾಳಿಕೆ ಮಾಡಿ ಜೆಡಿಎಸ್– ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಸಾಧ್ಯವಿಲ್ಲ. ನಿಮಗೆಲ್ಲ ಎಚ್ಚರಿಕೆ ನೀಡುವುದಕ್ಕಾಗಿಯೇ ನಾವೆಲ್ಲರೂ ಇಲ್ಲಿ ಬಂದಿದ್ದೇವೆ’ ಎಂದು ಹರಿಹಾಯ್ದರು.
‘ಕೇವಲ ಲೋಕೋಪಯೋಗಿ ಕಚೇರಿಗೆ ಹೋಗ್ತೀರಲ್ಲ. ಬೇಕಾದರೆ ನನ್ನ ಕಚೇರಿಗೆ ಬನ್ನಿ, ನಮ್ಮ ಅಧಿಕಾರಿಗಳ ಮೇಲೂ ದಾಳಿ ಮಾಡಿ. ನಿಮಗಾಗಿ ನನ್ನ ಕಚೇರಿ ಹಾಗೂ ಮನೆಯ ಬಾಗಿಲು ಸದಾ ತೆರೆದಿರುತ್ತದೆ. ನೀವು ಯಾರ ಯಾರ ಹತ್ತಿರ ಎಷ್ಟು ವಸೂಲಿ ಮಾಡುತ್ತೀರಾ ಎಂಬುದು ನನಗೆಲ್ಲ ಗೊತ್ತಿದೆ. ನಮ್ಮ ಬಳಿಯೂ ಎಸಿಬಿ ಇದೆ. ಎಚ್ಚರಿಕೆ ಇರಲಿ’ ಎಂದು ಗುಡುಗಿದರು.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ‘ನರೇಂದ್ರ ಮೋದಿಯವರಿಗೆ ಪ್ರಜಾಪ್ರಭುತ್ವಹಾಗೂ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಐ.ಟಿ ವಿರುದ್ಧ ಈಗ ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದೇವೆ. ತಪ್ಪು ತಿದ್ದುಕೊಳ್ಳದಿದ್ದರೆ ಹೋರಾಟ ಅನಿವಾರ್ಯ’ ಎಂದು ಗುಡುಗಿದರು.
ಐಟಿ ಮುಖ್ಯಸ್ಥ 420: ರೇವಣ್ಣ
‘ಯಡಿಯೂರಪ್ಪಗೆ ಅರ್ಧ ಗಂಟೆಯಲ್ಲೇ ಕ್ಲೀನ್‌ಚಿಟ್ ಕೊಟ್ಟ ಐಟಿ ಮುಖ್ಯಸ್ಥ 420. ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿರುವ ಅವರು ಮುಖ್ಯಸ್ಥರ ಸ್ಥಾನಕ್ಕೆ ನಾಲಾಯಕ್. ಸರ್ಕಾರಿ ಕೆಲಸ ಬಿಟ್ಟು ಬಿಜೆಪಿಗೆ ಸೇರಲಿ. ಹೀಗೆಲ್ಲಾ ಮಾಡಿ ದೇವೇಗೌಡರ ಕುಟುಂಬದವರನ್ನು ಹೆದರಿಸಬಹುದು ಎನ್ನುವುದು ಕೇವಲ ಭ್ರಮೆ. ಐಟಿ ದಾಳಿಯಿಂದ ಲೋಕಸಭೆ ಚುನಾವಣೆಯಲ್ಲಿ ಶೇ 10ರಷ್ಟು ಮತಗಳು ಹೆಚ್ಚಾಗಲಿವೆ. ಇಲಾಖೆ ಮುಖ್ಯಸ್ಥರ ವಿರುದ್ಧ ಸಿಬಿಐ ತನಿಖೆ ಆಗಬೇಕು’ ಎಂದು ಸಚಿವ ಎಚ್.ಡಿ. ರೇವಣ್ಣ ವಾಗ್ದಾಳಿ ನಡೆಸಿದರು.
‘ನನ್ನ ಆಪ್ತರ ಮನೆಗಳ ಮೇಲೆ ಐಟಿ ದಾಳಿ ನಡೆದಿಲ್ಲ. ಅಕ್ರಮ ಹಣ ಪತ್ತೆಯಾದರೆ ಕಾನೂನು ಕ್ರಮ ಕೈಗೊಳ್ಳಲಿ. ರಾಜ್ಯದ 28 ಕ್ಷೇತ್ರಗಳ ಪೈಕಿ ಮಂಡ್ಯ, ಹಾಸನ ಕ್ಷೇತ್ರದ ಮುಖಂಡರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದು ಹಾಗೂ ಕಾನೂನು ಹೋರಾಟ ನಡೆಸುವ ಕುರಿತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.
ಕುಂಬಳಕಾಯಿ ಕಳ್ಳ ಎಂದರೆ ಜೋಡೆತ್ತಿನ ಸರ್ಕಾರಕ್ಕೆ ಕೋಪ ಏಕೆ
ಬೆಂಗಳೂರು: ಐ.ಟಿ ಇಲಾಖೆಯ ಕಚೇರಿ ಎದುರು ಜೆಡಿಎಸ್–ಕಾಂಗ್ರೆಸ್ ನಾಯಕರು ಧರಣಿ ನಡೆಸಿ ಕಾನೂನು ಸಂಸ್ಥೆಗಳನ್ನು ಬುಡಮೇಲುಗೊಳಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದರು.
‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಾನೂನು ಪರಿಜ್ಞಾನ ಇದ್ದರೆ ಈ ರೀತಿ ಮಾಡುತ್ತಿರಲಿಲ್ಲ. ಯಾವುದೇ ಜನಪ್ರತಿನಿಧಿ ಮೇಲೆ ದಾಳಿ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಂಸದ ಜಿ.ಎಂ.ಸಿದ್ದೇಶ್ವ, ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ, ಮಲ್ಲೇಶ್ವರ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಸಂಬಂಧಿ ಮನೆ ಮೇಲೂ ಐಟಿ ದಾಳಿಯಾದಾಗ ಬಿಜೆಪಿ ಪ್ರತಿಭಟನೆ ನಡೆಸಲಿಲ್ಲ. ಆದರೆ, ಕುಂಬಳಕಾಯಿ ಕಳ್ಳ ಎಂದರೆ ಜೋಡೆತ್ತಿನ ಸರ್ಕಾರ ಹೆಗಲು ಮುಟ್ಟಿಕೊಳ್ಳುವುದು ಏಕೆ ಹಾಗೂ ಕೋಪ ಮಾಡಿಕೊಳ್ಳುವುದು ಏಕೆ’ ಎಂದು ಅವರು ಪ್ರಶ್ನಿಸಿದರು.
ಐ.ಟಿ ದಾಳಿಗೆ ಈಗೇಕೆ ಪ್ರತಿಭಟನೆ: ಸುಮಲತಾ
ಕೆ.ಆರ್.ನಗರ: ‘ಹಿಂದೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟರಾದ ಯಶ್, ಸುದೀಪ್ ಮನೆ ಮೇಲೆ ಐಟಿ ದಾಳಿ ಆಗಿದೆ. ಆಗ ಪ್ರತಿಭಟಿಸದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಈಗ ಆಪ್ತರ ಮನೆ ಮೇಲೆ ದಾಳಿ ನಡೆದಾಗ ಧರಣಿ, ಪ್ರತಿಭಟಿಸುವುದು ಎಷ್ಟು ಸರಿ?’ ಇದು, ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪ್ರಶ್ನೆ. ತಾಲ್ಲೂಕಿನ ಚಂದಗಾಲು ಗ್ರಾಮದಲ್ಲಿ ಗುರುವಾರ ಚುನಾವಣಾ ಪ್ರಚಾರದ ನಂತರ ಮಾತನಾಡಿದರು.
ಸರಿ– ಇಲ್ಲ ತಪ್ಪು: ವಿಜಯಶಂಕರ್
ಮಡಿಕೇರಿ: ‘ಆದಾಯ ತೆರಿಗೆ ಇಲಾಖೆಯು ಸ್ವಾಯತ್ತ ಸಂಸ್ಥೆಯಾಗಿದ್ದು, ತನ್ನದೇ ಅಧಿಕಾರವಿದೆ. ಚುನಾವಣೆ ಹೊತ್ತಲ್ಲಿ ದಾಳಿ ನಡೆಸಬೇಕೊ, ನಡೆಸಬಾರದೊ ಎನ್ನುವ ಪ್ರಶ್ನೆ ಬರುವುದಿಲ್ಲ. ದಾಳಿಯನ್ನೇ ನಡೆಸಬಾರದು ಎನ್ನುವ ಹೇಳಿಕೆಯೇ ತಪ್ಪು' ಎಂದು ಕೊಡಗು–ಮೈಸೂರು ಲೋಕಸಭಾ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಸಮರ್ಥಿಸಿಕೊಂಡರು.
‘ಎರಡು ಬಾರಿ ಸಂಸದನಾಗಿ ಜವಾಬ್ದಾರಿ ನಿರ್ವಹಿಸಿದ್ದು, ಐಟಿ ದಾಳಿ ನಡೆಸಬಾರದೆಂದು ಹೇಳುವುದಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಹೇಳಿಕೆ ಪರಿಣಾಮದ ಬಗ್ಗೆ ಕೊನೆಯಲ್ಲಿ ಎಚ್ಚೆತ್ತುಕೊಂಡ ವಿಜಯಶಂಕರ್, ‘ಇದು ದುರುದ್ದೇಶದ ದಾಳಿ. ಇದು ತಪ್ಪು’ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಪ್ರಯತ್ನಿಸಿದರು.
‘ಕೇಂದ್ರದ ಆದೇಶವನ್ನು ಐ.ಟಿ ಅಧಿಕಾರಿಗಳಿಗೆ ಧಿಕ್ಕರಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಚುನಾವಣೆ ಕಾಲದಲ್ಲಿ ದಾಳಿ ಆಗಿರುವುದು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ. ಈ ಹಿಂದಿನ ದಾಳಿಯಲ್ಲೂ ಇಂಥದ್ದೇ ಗೊಂದಲಕಾರಿ ಸನ್ನಿವೇಶ ಸೃಷ್ಟಿಯಾಗಿತ್ತು’ ಎಂದರು.
ಭರಪೂರ ಅನುದಾನವೂ ಕಾರಣ?
ಐಟಿ ದಾಳಿಗೆ ಮಂಡ್ಯ, ರಾಮನಗರ ಹಾಗೂ ಹಾಸನ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ನೀಡಿದ ಭರಪೂರ ಅನುದಾನವೂ ಕಾರಣ ಎನ್ನಲಾಗಿದೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಮೂರೂ ಜಿಲ್ಲೆಗಳಿಗೆ ವಿಶೇಷ ಅನುದಾನ ರೂಪದಲ್ಲಿ ₹ 6 ಸಾವಿರ ಕೋಟಿ ನೀಡಲಾಗಿದೆ. ಅಲ್ಪಾವಧಿ ಟೆಂಡರ್‌ಗಳ ಮೂಲಕ ಹೆಚ್ಚಿನ ಕಾಮಗಾರಿಗಳನ್ನು ನಡೆಸಲಾಗಿದೆ. ಜನವರಿಯಿಂದ ಮಾರ್ಚ್ ಅವಧಿಯಲ್ಲಿ ಗುತ್ತಿಗೆದಾರರಿಗೆ ಈ ಹಣ ಪಾವತಿ ಆಗಿದೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ಮಂಡ್ಯ ಜಿಲ್ಲೆಗೆ ಸರ್ಕಾರ ₹ 5 ಸಾವಿರ ಕೋಟಿ ವಿಶೇಷ ಅನುದಾನ ನೀಡಿದೆ. ಕೆಲವು ಆಯ್ದ ಗುತ್ತಿಗೆದಾರರ ಮೂಲಕ ಕಾಮಗಾರಿ ನಡೆಸಲಾಗಿದೆ. ಲೋಕೋಪಯೋಗಿ ಇಲಾಖೆಯ ಹಾಸನ ಕಾರ್ಯನಿರ್ವಾಹಕ ಕಚೇರಿ ವ್ಯಾಪ್ತಿಯಲ್ಲಿ ₹ 2 ಸಾವಿರ ಕೋಟಿ ಕಾಮಗಾರಿ ನಡೆಸಲಾಗಿದೆ. ಸಚಿವರ ಆಪ್ತರಿಗೆ ಗುತ್ತಿಗೆ ನೀಡಲಾಗಿದ್ದು, ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಕೆಲವು ಗುತ್ತಿಗೆದಾರರು ದೂರು ನೀಡಿದ್ದರು. ಈ ಆಧಾರದಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.
‘ಸುಮಲತಾ ಕಾರಣ’
‘ಐ.ಟಿ ದಾಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಕಾರಣ. ನಮ್ಮ ಮನೆಗೆ ಬಂದಿರುವ ಅಧಿಕಾರಿಗಳಿಗೆ ಏನೂ ಸಿಗುವುದಿಲ್ಲ, ಬರಿಗೈಯಲ್ಲಿ ವಾಪಸ್ ಹೋಗುತ್ತಾರೆ. ಈ ಬೆಳವಣಿಗೆಯಿಂದ ನಮ್ಮ ಹುರುಪು ಹೆಚ್ಚಾಗಿದೆ’ ಎಂದು ಸಚಿವ ಪುಟ್ಟರಾಜು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ‘ಐಟಿ ದಾಳಿಗೂ ನನಗೂ ಸಂಬಂಧ ಇಲ್ಲ. ದಾಳಿ ಅಷ್ಟು ಶಕ್ತಿ ನನಗಿದ್ದಿದ್ದರೆ ಸಂತೋಷಪಡುತ್ತಿದ್ದೆ. ಈ ರೀತಿ ಆರೋಪಿಸಿದರೆ ದೇವರು ಮೆಚ್ಚುವುದಿಲ್ಲ’ ಎಂದಿದ್ದಾರೆ.
***
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧಿಕ್ಕರಿಸುತ್ತಿರುವ ಕೇಂದ್ರ ಸರ್ಕಾರ, ವಿರೋಧಿಗಳನ್ನು ಮಟ್ಟ ಹಾಕಲು ಷಡ್ಯಂತ್ರ ಮಾಡುತ್ತಿದೆ. ಐ.ಟಿ ಇಲಾಖೆಯನ್ನು ರಾಜಕೀಯ ಸಂಸ್ಥೆಯಾಗಿ ಬಳಸುತ್ತಿದೆ.
–ದಿನೇಶ್ ಗುಂಡೂರಾವ್, ಅಧ್ಯಕ್ಷ, ಕೆಪಿಸಿಸಿ
ಕರ್ನಾಟಕವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಕೇಂದ್ರ ಸರ್ಕಾರ, ಐ.ಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯವರ ಒತ್ತಡದಿಂದ ಐಟಿ ಅಧಿಕಾರಿಗಳು ಈ ರೀತಿ ದಾಳಿ ಮಾಡುತ್ತಿದ್ದಾರೆ.
– ಪುಟ್ಟರಾಜು, ಸಚಿವ
ಕೇಂದ್ರ ಸರ್ಕಾರವು ಐಟಿ, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಚುನಾವಣಾ ಆಯೋಗವು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕು
-ಎಚ್. ಕೆ. ಪಾಟೀಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.