ಬೆಂಗಳೂರು: ‘ರಫೇಲ್ ವಿಮಾನಗಳ ಖರೀದಿಯಲ್ಲಿ ಕೇಂದ್ರ ಸರ್ಕಾರ ಹಗರಣ ಮಾಡಿದೆ’ ಎಂದು ಆರೋಪಿಸಿ ಮಲ್ಲೇಶ್ವರದಲ್ಲಿರುವ ಬಿಜೆಪಿ ಮುಖ್ಯ ಕಚೇರಿಗೆ ಭಾನುವಾರ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಆನಂದರಾವ್ ವೃತ್ತ ಬಳಿಯ ಗಾಂಧಿ ಪ್ರತಿಮೆ ಬಳಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಸೇರಿದ್ದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲ ನಿಮಿಷ ಸಭೆ ನಡೆಸಿ, ಆಕ್ರೋಶ ಹೊರಹಾಕಿದರು.
ಅಲ್ಲಿಂದ ಬೈಕ್ ರ‍್ಯಾಲಿ ಮೂಲಕ ಕಾರ್ಯಕರ್ತರು, ಮಲ್ಲೇಶ್ವರದ ಬಿಜೆಪಿ ಕಚೇರಿಯತ್ತ ಹೊರಟರು. ಅವರೆಲ್ಲರನ್ನೂ ಶೇಷಾದ್ರಿಪುರದ ನಟರಾಜ್ ಚಿತ್ರಮಂದಿರ ಬಳಿಯೇ ತಡೆದಿದ್ದ ಪೊಲೀಸರು, ವಾಪಸ್ ಹೋಗುವಂತೆ ಮನವಿ ಮಾಡಿದರು. ಪೊಲೀಸರ ಜೊತೆಗೇ ವಾಗ್ವಾದ ನಡೆಸಿದ ಕಾರ್ಯಕರ್ತರು, ಬ್ಯಾರಿಕೇಡ್ ಏರಿ ಮುಂದೆ ಹೋಗಲು ಪ್ರಯತ್ನಿಸಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಬಸನಗೌಡ ಬಾದರ್ಲಿ, ಮೊಹಮ್ಮದ್ ನಲಪಾಡ್ ಸೇರಿದಂತೆ 70 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದರು. ಸಂಜೆ ವೇಳೆಯೇ ಅವರನ್ನು ಬಿಡುಗಡೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.