ADVERTISEMENT

ಸಂಸದರ ಅಮಾನತು: ಕಾಂಗ್ರೆಸ್‌ ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2023, 14:26 IST
Last Updated 20 ಡಿಸೆಂಬರ್ 2023, 14:26 IST
ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಎದುರು ಬುಧವಾರ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. – ಪ್ರಜಾವಾಣಿ ಚಿತ್ರ
ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಎದುರು ಬುಧವಾರ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಂಸದರನ್ನು ಅಮಾನತುಗೊಳಿಸುವ ಮೂಲಕ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡುತ್ತಿದೆ’ ಎಂದು ಆಪಾದಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

‘ಸಂಸತ್‌ನ ಒಳಕ್ಕೆ ಜಿಗಿದು ದಾಂದಲೆ ನಡೆಸಿದವರು ಬಿಜೆಪಿ ಬೆಂಬಲಿತರು. ಅದನ್ನು ಖಂಡಿಸಿ, ವಿರೋಧ ಪಕ್ಷದ ಸದಸ್ಯರು ಪ್ರತಿಭಟಿಸಿದರೆ ಅಮಾನತು ಮಾಡಲಾಗುತ್ತಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭದ್ರತಾ ವೈಫಲ್ಯವನ್ನು ಮರೆಮಾಚುತ್ತಿದ್ದಾರೆ. ಪ್ರಧಾನಿ, ಗೃಹ ಸಚಿವರು ಭದ್ರತೆ ನೀಡುವಲ್ಲಿ ವಿಫಲವಾಗಿದ್ದಾರೆ. ಲೋಕಸಭೆಯಲ್ಲೂ ಸ್ಪಷ್ಟ ಉತ್ತರ ನೀಡುತ್ತಿಲ್ಲ’ ಎಂದು ಆಪಾದಿಸಿದರು.

ADVERTISEMENT

‘ಲೋಕಸಭೆ ಸ್ಪೀಕರ್‌ ವರ್ತನೆ ಸಹ ಬೇಸರ ತರಿಸಿದೆ. ಲೋಕಸಭಾ ಸದಸ್ಯರಿಗೆ ರಕ್ಷಣೆ ನೀಡಬೇಕಾದ ಸ್ಪೀಕರ್ ಅವರೇ ವಿರೋಧ ಪಕ್ಷದ ಸದಸ್ಯರನ್ನು ಸದನದಿಂದ ಹೊರಗೆ ಹಾಕುತ್ತಿದ್ದಾರೆ. ಇದು ದೇಶದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ವಿರೋಧ ಪಕ್ಷದ ಸಂಸದರು ನ್ಯಾಯ ಸಮ್ಮತವಾಗಿ ಹೋರಾಟ ನಡೆಸುತ್ತಿದ್ದಾರೆ ಎಂಬುದು ಪ್ರತಿ ನಾಗರಿಕನಿಗೂ ಅರಿವಿದೆ. ಕೇಂದ್ರದ ವಿಫಲತೆಯನ್ನು ಸಹ ಜನರು ಕಣ್ಣಾರೆ ಕಂಡಿದ್ದಾರೆ’ ಎಂದು ಹೇಳಿದರು.

‘ಜನರಿಗೆ ಹಾಗೂ ದೇಶಕ್ಕೆ ರಕ್ಷಣೆ ನೀಡಲು ವಿಫಲವಾಗಿರುವ ಬಿಜೆಪಿ ಸರ್ಕಾರ ತೊಲಗದಿದ್ದರೆ ಮುಂದಿನ ದಿನಗಳಲ್ಲಿ ದೇಶದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಮುಖಂಡರಾದ ಜಿ.ಜನಾರ್ದನ್‌, ಎ.ಆನಂದ್, ಸುಧಾಕರ್ ರಾವ್, ಪ್ರಕಾಶ್, ಹೇಮರಾಜ್, ಬಾಲು, ಕೆ.ಟಿ.ನವೀನ್ ಪುಟ್ಟರಾಜು, ದರ್ಶನ್, ಚೇತನ್, ಚಿನ್ನಿಪ್ರಕಾಶ್, ಓಬಳೇಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.