ADVERTISEMENT

ರಸ್ತೆ ಅವ್ಯವಸ್ಥೆ: ನೀರು ಚಿಮುಕಿಸಿ, ರಾಮನಾಮ ಜಪಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 22:45 IST
Last Updated 27 ಫೆಬ್ರುವರಿ 2023, 22:45 IST
   

ಬೆಂಗಳೂರು: ಗಿರಿನಗರದ ನಾಗೇಂದ್ರ ಬ್ಲಾಕ್‌ನಲ್ಲಿ ರಸ್ತೆ ಅಗೆದು ಬಿಟ್ಟಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಮನಾಮ ಜಪಿಸುವ ಮೂಲಕ ಭಾನುವಾರ ವಿಭಿನ್ನ ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ವಕ್ತಾರ ಶಂಕರ್ ಗುಹಾ ದ್ವಾರಕನಾಥ್ ನೇತೃತ್ವದಲ್ಲಿ ರಸ್ತೆಗೆ ನೀರು ಚಿಮುಕಿಸಿ ‘ಶ್ರೀ ರಾಮ್, ಜೈ ರಾಮ್‌’ ಎಂದು ಪಠಿಸುತ್ತಾ ರಸ್ತೆಯಲ್ಲಿ ಸಾಗಿದರು.

ನಾಗೇಂದ್ರ ಬ್ಲಾಕ್‌ನ ಎರಡನೇ ಮುಖ್ಯ ರಸ್ತೆಯಲ್ಲಿ ದುರಸ್ತಿ ಕಾಮಗಾರಿ ನಡೆಸಲು ಅಗೆದು ಎರಡು ತಿಂಗಳಾಗಿವೆ. ಇಡೀ ರಸ್ತೆಯಲ್ಲಿ ಕಲ್ಲು, ಮಣ್ಣು ಸುರಿದಿದ್ದು, ದೂಳಿನ ನಡುವೆ ಜೀವನ ಸಾಗಿಸುವಂತಾಗಿದೆ. ವಾಹನ ಸವಾರರು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ADVERTISEMENT

ಸ್ಥಳಕ್ಕೆ ಬಂದ ಬಿಜೆಪಿ ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.ಬಿಜೆಪಿ ಕಾರ್ಯಕರ್ತರ ಕಾಲಿಗೆ ನಮಸ್ಕರಿಸಿ ರಸ್ತೆ ಸರಿಪಡಿಸಿ ಎಂದು ಕೇಳಿದರು.

‌ಬಸವನಗುಡಿ ತುಂಬೆಲ್ಲಾ ಇದೇ ರೀತಿಯ ಸಮಸ್ಯೆಗಳಿದ್ದು, ಶಾಸಕರಾಗಲಿ ಅಥವಾ ಬಿಬಿಎಂಪಿ ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ಶಂಕರ್ ಗುಹಾ ದ್ವಾರಕಾನಾಥ್ ಆರೋಪಿಸಿದರು.

‌ಕಾಂಗ್ರೆಸ್ ಮುಖಂಡರಾದ ಸುಚೇಂದ್ರ, ಕೃಷ್ಣ, ರಾಘವೇಂದ್ರ, ರವಿಕುಮಾರ್, ರಾಜು, ಬಸವರಾಜು, ಗಿರಿನಗರ ವಾರ್ಡ್ ಅಧ್ಯಕ್ಷ ಶಿವಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.