ಬೆಂಗಳೂರು: ನಗರದ ಜ್ಞಾನಭಾರತಿ ಆವರಣದ ತೆರೆದ ಬಾವಿಯಲ್ಲಿ ಕಾನ್‌ಸ್ಟೆಬಲ್‌ವೊಬ್ಬರ ಶವ ಪತ್ತೆ ಆಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮಡಿವಾಳ ಠಾಣೆಯ ಕಾನ್‌ಸ್ಟೆಬಲ್ ಶಿವರಾಜ್ (30) ಮೃತರು.
ಶಿವರಾಜ್ ಅವರು ನಾಪತ್ತೆ ಆಗಿದ್ದಾರೆ ಎಂದು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಜೂನ್ 25ರಂದು ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಲೊಕೇಶನ್ ಆಧರಿಸಿ ಪರಿಶೀಲಿಸಿದಾಗ ಪೊಲೀಸರಿಗೆ ಜ್ಞಾನಭಾರತಿ ಆವರಣದಲ್ಲಿ ಕೊನೆಯದಾಗಿ ಲೊಕೇಶನ್ ಪತ್ತೆಯಾಗಿತ್ತು. ಸುತ್ತಮುತ್ತ ಹುಡುಕಾಟ ನಡೆಸಿದಾಗ ಸೋಮವಾರ ಶವ ಪತ್ತೆಯಾಗಿದೆ
ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ರಾಯಚೂರು ಜಿಲ್ಲೆ ದೇವದುರ್ಗದ ಹೊನ್ನಕಾಟಮಳ್ಳಿ ಗ್ರಾಮದ ಅವರ 2020ರಲ್ಲಿ ಸೇವೆಗೆ ಸೇರಿದ್ದರು. ಇವರ ಸಹೋದರ ದೂರು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
‘ನಮ್ಮ ಅಣ್ಣ ಗೌರಪ್ಪ ಅವರ ಪುತ್ರ ಗೌರೀಶ್‌ಗೆ ದಾವಣಗೆರೆಯ ವಾಣಿ ಎಂಬುವರ ಜತೆಗೆ ವಿವಾಹವಾಗಿತ್ತು. ಕೌಟುಂಬಿಕ ಗಲಾಟೆ ಹಿನ್ನೆಲೆಯಲ್ಲಿ ಎಲ್ಲ ಸಹೋದರರ ವಿರುದ್ಧ ದಾವಣಗೆರೆಯ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕಾಯ್ದೆ ಅಡಿ ದೂರು ನೀಡಿದ್ದರು. ಅದಾದ ಮೇಲೆ ಶಿವರಾಜ್ ಅವರಿಗೆ ವಾಣಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. ಇದರಿಂದ ಶಿವರಾಜ್ ನೊಂದಿದ್ದರು’ ಎಂದು ಮೃತರ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ.
‘ಶಿವರಾಜ್ ಉತ್ತರಹಳ್ಳಿಯಲ್ಲಿ ನೆಲೆಸಿದ್ದರು. ಜೂನ್ 25ರಂದು ಕೆಲಸಕ್ಕೆ ಹೋಗಿದ್ದು ಮನೆಗೆ ಮರಳಿಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಹುಡುಕಿದರೂ ಸುಳಿವು ಸಿಕ್ಕಿರಲಿಲ್ಲ’ ಎಂದು ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.