ADVERTISEMENT

ಉದ್ಯಮಿಗಳಿಗೆ ಭೂಮಿ ಹಂಚುತ್ತಿರುವ ಮೋದಿ: ಶಾಸಕ ಜಿಗ್ನೇಶ್‌ ಮೇವಾನಿ ಆಕ್ರೋಶ

ಭೂ ಸುಧಾರಣೆಗೆ ಆದ್ಯತೆ ನೀಡದ ಸರ್ಕಾರ: ಶಾಸಕ ಜಿಗ್ನೇಶ್‌ ಮೇವಾನಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 15:32 IST
Last Updated 25 ಫೆಬ್ರುವರಿ 2024, 15:32 IST
ಗೋಷ್ಠಿಯಲ್ಲಿ ಜಿಗ್ನೇಶ್‌ ಮೇವಾನಿ ಮಾತನಾಡಿದರು. ಜೆಎನ್‌ಯು ಸಹಾಯಕ ಪ್ರಾಧ್ಯಾಪಕ ಅಮಿತ್ ಥೋರಟ್, ಅರ್ಥಶಾಸ್ತ್ರಜ್ಞ ವಿನೋಜ್ ಅಬ್ರಹಾಂ, ಕೆ. ರಾಜು ಹಾಗೂ ಪತ್ರಕರ್ತೆ ಸೀಮಾ ಚಿಸ್ತಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಗೋಷ್ಠಿಯಲ್ಲಿ ಜಿಗ್ನೇಶ್‌ ಮೇವಾನಿ ಮಾತನಾಡಿದರು. ಜೆಎನ್‌ಯು ಸಹಾಯಕ ಪ್ರಾಧ್ಯಾಪಕ ಅಮಿತ್ ಥೋರಟ್, ಅರ್ಥಶಾಸ್ತ್ರಜ್ಞ ವಿನೋಜ್ ಅಬ್ರಹಾಂ, ಕೆ. ರಾಜು ಹಾಗೂ ಪತ್ರಕರ್ತೆ ಸೀಮಾ ಚಿಸ್ತಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭೂ ಸುಧಾರಣೆಗೆ ಸಂಬಂಧಿಸಿದಂತೆ ಅಂಬೇಡ್ಕರ್‌ ಅವರು ಉಳುವವರಿಗೆ ಭೂಮಿ ನೀಡಬೇಕೆಂದು ಸಲಹೆ ನೀಡಿದ್ದರು. ಆದರೆ, ಇದನ್ನು ಉದ್ಯಮಗಳಿಗೆ ಎಂದು ನರೇಂದ್ರ ಮೋದಿ ಬದಲಾಯಿಸಿದ್ದಾರೆ’ ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ’ದಲ್ಲಿ ‘ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ನಿಶ್ಚಯಾತ್ಮಕ ಕ್ರಮಗಳು’ ಗೋಷ್ಠಿಯಲ್ಲಿ ಭಾಗವಹಿಸಿ, ಮಾತನಾಡಿದರು. 

‘ಸಮಾಜದಲ್ಲಿ ಸಮಾನತೆ ತರಲು ಭೂ ರಹಿತ ದಲಿತರು ಹಾಗೂ ಇತರ ಹಿಂದುಳಿದ ವರ್ಗದವರಿಗೆ ಭೂಮಿ ಒದಗಿಸಬೇಕು. ಇದರಿಂದ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನ ದೊರೆಯುತ್ತದೆ. ಭೂಮಿ ಎನ್ನುವುದು ಸ್ವಾಭಿಮಾನದ ಸಂಕೇತವಾಗಿದೆ. ಆದರೆ, ದಲಿತರಿಗೆ ಹಂಚಿಕೆಯಾದ ಭೂಮಿಯನ್ನು ಕಾನೂನು ಬಾಹಿರವಾಗಿ ವಶಪಡಿಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.  

ADVERTISEMENT

‘ಜಾಗತೀಕರಣದ ಬಳಿಕ ಕೃಷಿ ಲಾಭದಾಯಕವಲ್ಲ ಎಂದು ಯುವಜನರು ಅದಾನಿ, ಅಂಬಾನಿ ಅವರ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಂಡರು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕೃಷಿ ಕೂಡ ಲಾಭದಾಯಕವಾಗುವತ್ತ ಮುಖಮಾಡಿದೆ. ಆದರೆ, ಭೂ ಸುಧಾರಣೆಗೆ ಸಂಬಂಧಿಸಿದಂತೆ ಯಾವುದೇ ಸರ್ಕಾರ ಆದ್ಯತೆ ನೀಡುತ್ತಿಲ್ಲ. ಇದಕ್ಕೆ ಬೇರೆ ಬೇರೆ ಒತ್ತಡಗಳು ಕಾರಣವಾಗಿವೆ’ ಎಂದು ತಿಳಿಸಿದರು. 

ಎಐಸಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಿಭಾಗದ ರಾಷ್ಟ್ರೀಯ ಸಂಯೋಜಕ ಕೆ. ರಾಜು, ‘ದೇಶದಲ್ಲಿ ಅಸಮಾನತೆ ಹೆಚ್ಚಿದೆ. ಸಂಪತ್ತು ಕೆಲವರ ಬಳಿ ಕೇಂದ್ರೀಕೃತವಾಗಿದೆ. ಎಲ್ಲ ಕ್ಷೇತ್ರಗಳನ್ನೂ ಖಾಸಗೀಕರಣ ಮಾಡಲಾಗುತ್ತಿದೆ. ಆದ್ದರಿಂದ ಖಾಸಗಿ ವಲಯದಲ್ಲಿಯೂ ಮೀಸಲಾತಿಗೆ ಆಗ್ರಹಿಸಬೇಕಿದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.