ಬೆಂಗಳೂರು: ‘ಸಂವಿಧಾನ ಬದಲಾವಣೆ ಕುರಿತು ರಾಷ್ಟ್ರದ್ರೋಹದ ಹೇಳಿಕೆ ನೀಡಿರುವ ಉಡುಪಿಯ ಪೇಜಾವರ ಮಠದ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಆಗ್ರಹಿಸಿದರು.
ಪತ್ರಿಕಾ ಹೇಳಿಕೆಯಲ್ಲಿ ಅವರು, ‘ಸಮಾಜದ ಪ್ರತಿ ಸಮುದಾಯಕ್ಕೂ ಒಳಿತನ್ನೇ ಬಯಸುವ ಸಂವಿಧಾನದ ಅವಶ್ಯಕತೆ ಈ ಸ್ವಾಮೀಜಿಗಳಿಗೆ ಬೇಕಿಲ್ಲ. ವರ್ಣಾಶ್ರಮ, ತಾರತಮ್ಯ ಪೋಷಿಸುವ ಮನುಸ್ಮೃತಿಯೇ ಬೇಕಾಗಿದೆ. ಹಾಗಾಗಿ ಸಂವಿಧಾನ ವಿರುದ್ಧ ಮಾತನಾಡದಂತೆ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.
‘ಸಂವಿಧಾನ ರಕ್ಷಣೆ ನಿಟ್ಟಿನಲ್ಲಿ ಕಠಿಣ ಕ್ರಮಕೈಗೊಳ್ಳಬೇಕು. ಮನುವಾದಿಗಳ ಸಂಖ್ಯೆ ಹೆಚ್ಚದಂತೆ ನೋಡಿಕೊಳ್ಳಬೇಕು. ಮಠಗಳಲ್ಲಿ ಪಂಕ್ತಿಭೇದ ಮಾಡುವವರು ಪ್ರಜೆಗಳನ್ನು ಸಮಾನವಾಗಿ ಕಾಣುವುದಿಲ್ಲ. ಅಸ್ಪೃಶ್ಯತೆ ಪಾಲನೆ, ಮೌಢ್ಯ ಬಿತ್ತುವ ಸ್ವಾಮೀಜಿಗಳು ಸಂವಿಧಾನದ ವಿರುದ್ಧ ಮಾತನಾಡದಂತೆ ತಾಕೀತು ಮಾಡಬೇಕು’ ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.