ಬೆಂಗಳೂರು: ‘ಕನ್ನಡವೂ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳ ಉಳಿವಿಗೆ ಸಾಂವಿಧಾನಿಕ ಬದಲಾವಣೆ ತರುವ ಅಗತ್ಯವಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಟಿ.ಎಸ್. ನಾಗಾಭರಣ ತಿಳಿಸಿದರು.
ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ಕಾರ್ಮಿಕ ಲೋಕ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ–ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
‘1965ರಲ್ಲಿ ಭಾಷಾವಾರು ಪ್ರಾಂತಗಳ ರಚನೆಯಾದಾಗ ರಾಜ್ಯದ ಗಡಿ, ಅಧಿಕಾರಗಳಂತಹ ವಿಚಾರವನ್ನು ಸಂವಿಧಾನಕ್ಕೆ ಸೇರಿಸಲಾ ಯಿತು. ಆದರೆ, ರಾಜ್ಯ ಭಾಷೆಗಳ ಸ್ಥಾನಮಾನ ವ್ಯಾಪ್ತಿಯ ಬಗ್ಗೆ ಸಂವಿಧಾನಕ್ಕೆ ಅಗತ್ಯ ಮಾರ್ಪಾಡು ಮಾಡಲಿಲ್ಲ. ಹಾಗಾಗಿ, ಕನ್ನಡ ಶಿಕ್ಷಣ, ಆಡಳಿತ, ಸಾರ್ವಜನಿಕ ವಲಯಗಳಲ್ಲಿ ಭಾಷೆ ಬಳಕೆಯ ಬಗ್ಗೆ ಗೊಂದಲವಿದೆ’ ಎಂದು ಹೇಳಿದರು.
ಕವಿ ದೊಡ್ಡರಂಗೇಗೌಡ, ‘ಇತ್ತೀಚೆಗೆ ಕನ್ನಡ ನಮ್ಮ ಮನೆ-ಮನಗಳಿಂದ ದೂರವಾಗುತ್ತಿದೆ. ತಂದೆ-ತಾಯಿ ಮತ್ತು ಮನೆಯ ಹಿರಿಯರು ಮಕ್ಕಳಿಗೆ ಕನ್ನಡ ಕಲಿಸಬೇಕು. ಕನ್ನಡ ಶಾಲೆಗಳನ್ನುಉಳಿಸುವ ಪ್ರಯತ್ನಗಳಿಗೆ ಜನ ಸ್ಪಂದಿಸುತ್ತಿಲ್ಲ. ಇದಕ್ಕೆ ಖಾಸಗಿ ಶಾಲೆಗಳು ಸೃಷ್ಟಿಸಿರುವ ಭ್ರಮೆ ಕಾರಣವಾಗಿದೆ. ಖಾಸಗಿ ಶಾಲೆಗಳ ಲಾಬಿ ಕನ್ನಡ ಬೆಳೆಯಲು ಬಿಡುತ್ತಿಲ್ಲ. ಹಾಗಾಗಿ, ಕನ್ನಡದ ಕಾಯಕಲ್ಪಕ್ಕೆ ಮತ್ತು ರೋಗಗ್ರಸ್ತ ಮನಸ್ಸುಗಳಿಗೆ ಚಿಕಿತ್ಸೆ ನೀಡಲು ‘ಗೋಕಾಕ್ ಚಳವಳಿ’ ಮಾದರಿಯಲ್ಲಿ ಒಂದು ದೊಡ್ಡ ಆಂದೋಲನ ನಡೆಯುವ ಅನಿವಾರ್ಯತೆ ಇದೆ’ ಎಂದರು.
ಕಾರ್ಯಕ್ರಮದಲ್ಲಿ ಎನ್.ಎಸ್. ತಾರಾನಾಥ ಅವರಿಗೆ ‘ಡಾ.ಎಂ. ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ’, ಆರ್. ದೊಡ್ಡೇಗೌಡ ಅವರಿಗೆ ‘ಕನ್ನಡ ಅರವಿಂದ ಪ್ರಶಸ್ತಿ’, ನ. ನಾಗರಾಜಯ್ಯ ಅವರಿಗೆ ‘ಕನ್ನಡ ಚಿರಂಜೀವಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಸಂತೋಷಕುಮಾರ್ ಮೆಹೆಂದಳೆ ಅವರ ‘ವೈಜಯಂತಿಪುರ’ಕ್ಕೆ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’, ಸಂಧ್ಯಾ ಅವರ ‘ಪ್ರಾಚೀನ ಕರ್ನಾಟಕದ ಮಹಿಳಾ ಲೋಕ’, ಅಂಜನಾತನಯ ಅವರ ‘ಶ್ರೀ ತೆನ್ಮೋೞಿ ಕೈಸನ್’ ಪುಸ್ತಕಗಳಿಗೆ ಸಮಾಧನಕರ ಬಹುಮಾನ ನೀಡಲಾಯಿತು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹಟ್ಣದ ಸರ್ಕಾರಿ ಪ್ರೌಢಶಾಲೆಗೆ ‘ಉತ್ತಮ ಸರ್ಕಾರಿ ಶಾಲೆ ಬಹುಮಾನ’ ನೀಡಲಾಯಿತು.
ವಿದ್ವಾಂಸ ಆರ್. ಶೇಷಶಾಸ್ತ್ರಿ, ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.