ಬೆಂಗಳೂರು: ಹೆಮ್ಮಿಗೆಪುರದಲ್ಲಿರುವ 25 ಎಕರೆ ಭೂಮಿಯಲ್ಲಿ ನಗರದ ಅತಿದೊಡ್ಡ ಟವರ್ ‘ಸ್ಕೈಡೆಕ್’ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ಸುಮಾರು 250 ಮೀಟರ್ ಎತ್ತರ ನಿರ್ಮಾಣವಾಗಲಿದ್ದು, ಪ್ರವಾಸಿ ತಾಣವನ್ನಾಗಿಸಲು ಉದ್ದೇಶಿಸಲಾಗಿದೆ. ಹೀಗಾಗಿ, ಬೆಂಗಳೂರಿನ ದಕ್ಷಿಣ ಹಾಗೂ ನೈರುತ್ಯ ದಿಕ್ಕಿನಲ್ಲಿ ನಗರದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುವುದಿಲ್ಲ ಎನ್ನಲಾಗಿದೆ.
ಎಚ್‌ಎಎಲ್ ಭೂಮಿ ನೀಡಲು ನಿರಾಕರಿಸಿದ ಮೇಲೆ ಬಿಬಿಎಂಪಿ ಮೂರು ಸ್ಥಳಗಳನ್ನು ಗುರುತಿಸಿತ್ತು. ಅದರಲ್ಲಿ ಹೆಮ್ಮಿಗೆಪುರ ಕೂಡ ಒಂದಾಗಿತ್ತು. ನಗರದ ಸಚಿವರು ಹಾಜರಿದ್ದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಮ್ಮಿಗೆಪುರ ಸೇರಿದಂತೆ ಜ್ಞಾನಭಾರತಿ ಆವರಣ ಹಾಗೂ ಕೊಮ್ಮಘಟ್ಟ ಪ್ರದೇಶವನ್ನು ಸ್ಕೈಡೆಕ್ ನಿರ್ಮಾಣಕ್ಕೆ ಪ್ರಸ್ತಾಪಿಸಿದ್ದರು.
ಜ್ಞಾನಭಾರತಿ ಆವರಣ ಸುಮಾರು 1,201 ಎಕರೆ ಪ್ರದೇಶದಲ್ಲಿದ್ದು, ಇದರಲ್ಲಿ ಪ್ರವಾಸಿ ತಾಣ ಮಾಡಿದರೆ ಪಕ್ಷಿ ಸಂಕುಲಕ್ಕೆ ತೊಂದರೆಯಾಗುತ್ತದೆ. ಜೊತೆಗೆ ಶೈಕ್ಷಣಿಕ
ತಾಣವಾಗಿದ್ದು, ವಿದ್ಯಾರ್ಥಿಗಳಿಗೆ
ತೊಂದರೆಯಾಗುತ್ತದೆ ಎಂದು ಈ
ಪ್ರಸ್ತಾವವನ್ನು ಕೈಬಿಡಲಾಯಿತು. ಪ್ರಧಾನಿ ಮೋದಿ ಅವರಿಗಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡಿದ್ದ ಕೊಮ್ಮಘಟ್ಟ ಪ್ರದೇಶ ತುಂಬಾ ದಟ್ಟಣೆಯಾಗಿರುವು
ದರಿಂದ ಅದನ್ನು ಕೈಬಿಡಲಾಯಿತು.
ನೈಸ್ ಸಂಸ್ಥೆ ಅಧೀನದಲ್ಲಿರುವ ಹೆಮ್ಮಿಗೆಪುರದ 25 ಎಕರೆ ಪ್ರದೇಶದಲ್ಲಿ ‘ಸ್ಕೈಡೆಕ್’ ಮಾಡಲು ನಗರದ ಸಚಿವರು ಸಮ್ಮತಿಸಿದರು. ತುರಹಳ್ಳಿ ಅರಣ್ಯ ಪ್ರದೇಶ, ಸೋಮಪುರ ಈ ಪ್ರದೇಶಕ್ಕೆ ಹೊಂದಿಕೊಂಡಿದ್ದು, ತಲಘಟ್ಟಪುರ ಮೆಟ್ರೊ ನಿಲ್ದಾಣ ಐದು ಕಿಲೋ ಮೀಟರ್ ದೂರದಲ್ಲಿದೆ. ಅಲ್ಲದೆ ಈ ಪ್ರದೇಶ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆ ಕ್ಷೇತ್ರ ಕನಕಪುರಕ್ಕೂ ಹತ್ತಿರವಾಗಿದೆ ಎಂದು ಅಂತಿಮಗೊಳಿಸಲಾಯಿತು ಎನ್ನಲಾಗಿದೆ.
‘ಸ್ಕೈಡೆಕ್ ನಿರ್ಮಾಣದ ಪ್ರದೇಶ ನಿಗದಿಪಡಿಸುವ ಬಗ್ಗೆ ಸಚಿವ ಸಂಪುಟದಲ್ಲಿ ವಿಸ್ತಾರವಾಗಿ ಚರ್ಚಿಸಲಾಗುವುದು. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣವನ್ನು ಗಮನದಲ್ಲಿಟ್ಟುಕೊಂಡು ಸ್ಥಳವನ್ನು ಅಂತಿಮಗೊಳಿಸುವ ಯಾವ ಉದ್ದೇಶವೂ ಇಲ್ಲ. ಎಲ್ಲ ದೃಷ್ಟಿಕೋನಗಳಿಂದಲೂ ಆಲೋಚನೆ ಮಾಡಿ ತೀರ್ಮಾನ ಮಾಡಲಾಗುತ್ತದೆ’ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.