ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ ಆರೋಪದಡಿ ನಟ ಚೇತನ್ ಕುಮಾರ್ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.
‘ವಕೀಲ ಆರ್.ಎಲ್.ಎನ್ ಮೂರ್ತಿ ಅವರು ದೂರು ನೀಡಿದ್ದಾರೆ. ಚೇತನ್ ವಿರುದ್ಧ ಎನ್‌ಸಿಆರ್ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ದೂರಿನ ವಿವರ: ‘ನಟನೆಂದು ಹೇಳಿಕೊಳ್ಳುತ್ತಿರುವ ವಿದೇಶಿ ಪ್ರಜೆ ಚೇತನ್, ನಾಡಪ್ರಭು ಕೆಂಪೇಗೌಡ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದಾರೆ’ ಎಂದು ಮೂರ್ತಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
‘ಚೇತನ್ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಪದೇ ಪದೇ ಗಣ್ಯ ವ್ಯಕ್ತಿಗಳ ವಿರುದ್ಧ ಈತ ಹೇಳಿಕೆ ನೀಡುತ್ತಿದ್ದಾನೆ. ಕಾನೂನಿನ ಚೌಕಟ್ಟಿನಲ್ಲಿ ಚೇತನ್ ಹೇಳಿಕೆಯು ಶಿಕ್ಷಾರ್ಹ ಅಪರಾಧವಾಗಿದೆ. ನಾಡಪ್ರಭು ಕೆಂಪೇಗೌಡ ಅವರು ಮಹಾನ್ ವ್ಯಕ್ತಿಯೆಂದು ಜನರು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಚೇತನ್ ಅವರನ್ನು ಠಾಣೆಗೆ ಕರೆಸಿ ಸೂಕ್ತ ತಿಳಿವಳಿಕೆ ನೀಡಿ, ಅವಹೇಳನಕಾರಿ ಪೋಸ್ಟ್ ಅಳಿಸಿಹಾಕುವಂತೆ ಸೂಚಿಸಬೇಕು’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.