ಬೆಂಗಳೂರು: ಸಚಿವಾಲಯದಲ್ಲಿ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ನಕಲಿ ಗುರುತಿನ ಚೀಟಿ ತೋರಿಸಿ ವಿಧಾನಸೌಧಕ್ಕೆ ಪ್ರವೇಶ ಪಡೆದು ಓಡಾಟ ನಡೆಸುತ್ತಿದ್ದ ಗುತ್ತಿಗೆದಾರರೊಬ್ಬರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಜಯನಗರದ ನಿವಾಸಿ ಶ್ರೀಶೈಲ ಜಕ್ಕಣ್ಣನವರ್ ಬಂಧಿತ ಆರೋಪಿ.
‘ಎಂ.ಎ ಪದವಿ ಪಡೆದಿರುವ ಜಕ್ಕಣ್ಣನವರ್ ಗುತ್ತಿಗೆದಾರರಾಗಿದ್ದಾರೆ. ಗುತ್ತಿಗೆ ಸಂಬಂಧಿತ ಕೆಲಸಕ್ಕಾಗಿ ಆಗಾಗ್ಗೆ ವಿಧಾನಸೌಧಕ್ಕೆ ಬರುತ್ತಿದ್ದರು. ಪಾಸ್ ಇಲ್ಲದೇ ವಿಧಾನಸೌಧದ ಒಳಕ್ಕೆ ಪ್ರವೇಶ ಪಡೆಯಲು ಪರದಾಡುತ್ತಿದ್ದರು. ಇದರಿಂದ ತಪ್ಪಿಸಿಕೊಳ್ಳಲು ಸಚಿವಾಲಯದಲ್ಲಿ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ನಕಲಿ ಗುರುತಿನ ಚೀಟಿ ತೋರಿಸಿ ವಿಧಾನಸೌಧದ ಆವರಣ ಪ್ರವೇಶಿಸುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
‘ಆಗಸ್ಟ್ 5ರಂದು ನಕಲಿ ಗುರುತಿನ ಚೀಟಿ ತೋರಿಸಿ ತೆರಳುತ್ತಿದ್ದಾಗ ಅನುಮಾನಗೊಂಡ ಭದ್ರತಾ ಸಿಬ್ಬಂದಿ ಆರೋಪಿಯನ್ನು ತಡೆದು ವಿಚಾರಣೆ ನಡೆಸಿದರು. ಗುರುತಿನ ಚೀಟಿ ಪರಿಶೀಲಿಸಿದರು. ಆಗ ಅದು ನಕಲಿ ಎಂದು ಗೊತ್ತಾಯಿತು. ಬಳಿಕ ಜಕ್ಕಣ್ಣನವರ್ ಅವರನ್ನು ಬಂಧಿಸಲಾಯಿತು’ ಎಂದು ಮೂಲಗಳು ಹೇಳಿವೆ.
ಮುಖ್ಯಮಂತ್ರಿ ಕಚೇರಿಯಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಕೆಲವು ವ್ಯಕ್ತಿಗಳಿಗೆ ಈ ವ್ಯಕ್ತಿ ವಂಚಿಸಿರುವ ಆರೋಪವೂ ಇದೆ. ಆದರೆ, ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.