ಬೆಂಗಳೂರು: ‘ಪ್ರೀತಿಗೆ ಧರ್ಮದ ಬಣ್ಣ ಬಳಿದು ಕೋಮುವಾದ, ದ್ವೇಷದ ಬೀಜ ಬಿತ್ತುವ ಉದ್ದೇಶದ ಮದುವೆಗಾಗಿ ಮತಾಂತರ ತಡೆ ಕಾಯ್ದೆ ರಚಿಸುವ ಚಿಂತನೆಯನ್ನು ಕೈಬಿಡಬೇಕು’ ಎಂದು ಒತ್ತಾಯಿಸಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಲವು ಸಂಘಟನೆಗಳ ಸದಸ್ಯರು, ‘ಕೋಮವಾದಿ ಕಾನೂನು ತಿರಸ್ಕರಿಸಿ’, ‘ದ್ವೇಷ ಬಿಡು, ಪ್ರೀತಿ ತಪ್ಪಲ್ಲ’, ‘ಪ್ರೀತಿಗೆ ಜಾತಿ, ಧರ್ಮದ ಮಿತಿಯಿಲ್ಲ’, ‘ಪ್ರೀತಿ ಅಪರಾಧವಲ್ಲ’ ಎಂಬ ಘೋಷಣಾ ಫಲಕ ಪ್ರದರ್ಶಿಸಿದರು.
‘ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂಇದೆ. ಅಂಥ ಹಕ್ಕನ್ನು ಕಾನೂನು ಮೂಲಕ ಕಸಿದುಕೊಳ್ಳಲು ಸರ್ಕಾರ ಹೊರಟಿದೆ. ಇಂಥ ಕಾನೂನು, ಧರ್ಮಗಳ ವಿರುದ್ಧ ಮತ್ತಷ್ಟು ದ್ವೇಷಕ್ಕೆ ಕಾರಣವಾಗಲಿದೆ. ಹೀಗಾಗಿ, ಕಾನೂನು ತಿರಸ್ಕರಿಸಬೇಕು’ ಎಂದೂ ಒತ್ತಾಯಿಸಿದರು.
‘ಕೋವಿಡ್ ಕಾರಣದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಕೆಲಸ ಕಳೆದುಕೊಂಡು ಬದುಕು ನಡೆಸುವುದೂ ಕಷ್ಟವಾಗಿದೆ. ಇಂಥ ಸಂದರ್ಭದಲ್ಲಿ ಧಾರ್ಮಿಕ ಅನ್ಯೋನ್ಯ ಹಾಗೂ ಪ್ರೀತಿ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶಿಸುತ್ತಿದೆ. ಜನರ ನಡುವೆ ಕೋಮವಾದಿ ಹಾಗೂ ದ್ವೇಷದ ಬೀಜ ಬಿತ್ತುವ ಸರ್ಕಾರಗಳ ಪ್ರಯತ್ನವನ್ನು ನಾವು ಖಂಡಿಸುತ್ತೇವೆ. ಸಂವಿಧಾನದ ಮೇಲೆಯೇ ಬಿಜೆಪಿ ದಾಳಿ ಮಾಡುತ್ತಿದ್ದು, ಇದರಿಂದ ಹಿಂದೆ ಸರಿಯಬೇಕು’ ಎಂದೂ ಪ್ರತಿಭಟನಕಾರರು ಹೇಳಿದರು.
ಪ್ರತಿಭಟನೆಗೆ ಬೆಂಬಲ: ‘ನ್ಯಾಯಕ್ಕಾಗಿ ಅಖಿಲ ಭಾರತೀಯ ವಕೀಲರ ಒಕ್ಕೂಟ, ಅಖಿಲ ಭಾರತೀಯ ಮಹಿಳಾ ಸಾಂಸ್ಕೃತಿಕ ಸಂಘಟನೆ, ಆಲ್ ಇಂಡಿಯಾ ಪೀಪಲ್ಸ್ ಫೋರಂ, ದಲಿತ ಸಂಘರ್ಷ ಸಮಿತಿ–ಭೀಮವಾದ, ದಲಿತ ಸಂಘರ್ಷ ಸಮಿತಿ–ಸಂಯೋಜಕ, ಜನವಾದಿ ಮಹಿಳಾ ಸಂಘಟನೆ ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.