ಬೆಂಗಳೂರು: ಎನ್.ಆರ್. ಕಾಲೊನಿಯ ಶ್ರೀ ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್‌ನ ವಜ್ರ ಮಹೋತ್ಸವ ವರ್ಷಾಚರಣೆ ಅಂಗವಾಗಿ ‘ಮಹಿಳಾ ಉದ್ಯಮಿಗಳಿಗೆ ಸಹಕಾರಿ ಸಂತೆ’ ಆಯೋಜಿಸಲಾಗಿತ್ತು.
ರಾಜ್ಯ ಮಹಿಳಾ ಉದ್ಯಮಿಗಳ ಸಂಸ್ಥೆ– ಅವೇಕ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಮಹಿಳಾ ಉದ್ಯಮಿಗಳ ಸಂವಾದ ಶನಿವಾರ ನಡೆಯಿತು. ಸಂತೆಯಲ್ಲಿ ಆಹಾರ, ಉಡುಪು, ಆಲಂಕಾರಿಕ ವಸ್ತು, ಗೃಹಬಳಕೆಯ ವಸ್ತುಗಳ ಮಾರಾಟವಿತ್ತು.
ಶಾಸಕ ರವಿಸುಬ್ರಮಣ್ಯ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಅವರು ‘ಸಹಕಾರಿ ಸಂತೆ’ಯನ್ನು ಉದ್ಘಾಟಿಸಿದರು.
ಸಂವಾದದಲ್ಲಿ ಮಾತನಾಡಿದ ಪೀಣ್ಯ ಕೈಗಾರಿಕೆ ಸಂಘದ ಆರ್. ಶಿವಕುಮಾರ್, ‘ಕೇಂದ್ರ ಸರ್ಕಾರ 12 ಕೈಗಾರಿಕಾ ಪಾರ್ಕ್ ಆರಂಭಿಸುವುದಾಗಿ ಘೋಷಿಸಿದೆ. ಇದರಲ್ಲಿ ಎರಡನ್ನು ರಾಜ್ಯದಲ್ಲಿ ಸ್ಥಾಪಿಸಬೇಕು. ಅದರಲ್ಲಿ ಒಂದನ್ನು ಮಹಿಳಾ ಉದ್ಯಮಿಗಳಿಗೆ ಮೀಸಲಿಡಬೇಕು’ ಎಂದರು.
‘ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಭಾರಿ ಕೈಗಾರಿಕೆ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಇಬ್ಬರೂ ನಮ್ಮ ರಾಜ್ಯದವರಾಗಿದ್ದು, ಅವರ ಮನವೊಲಿಕೆ ಮಾಡಿ ಕೈಗಾರಿಕೆ ಪಾರ್ಕ್ ಪಡೆಯಬೇಕು’ ಎಂದು ಸಲಹೆ ನೀಡಿದರು.
ಬ್ಯಾಂಕ್ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಮಾತನಾಡಿ, ‘ನಮ್ಮ ಬ್ಯಾಂಕ್ ವಜ್ರ ಮಹೋತ್ಸವ ವರ್ಷಚರಣೆ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬ್ಯಾಂಕ್ ಲಾಭದಲ್ಲಿದ್ದು, ಠೇವಣಿದಾರರು ಸಂತಸದಲ್ಲಿದ್ದಾರೆ’ ಎಂದು ಹೇಳಿದರು. ಅವೇಕ್ ಸಂಸ್ಥೆ ಅಧ್ಯಕ್ಷೆ ಎನ್.ಆರ್.ಆಶಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.