ಬೆಂಗಳೂರು: ಕೊರೊನಾ ಸೋಂಕು ಶಂಕಿತರ ಸಂಖ್ಯೆ ಹೆಚ್ಚುತ್ತಿರವ ಹಿನ್ನೆಲೆಯಲ್ಲಿಚಿಕಿತ್ಸೆ ಒದಗಿಸಲು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡುವ ಜತೆಗೆ ದಾಖಲಾದವರಆರೋಗ್ಯದ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ.
ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ (ಆರ್‌ಜಿಐಸಿಡಿ), ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಎಲ್ಲ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ನಗರದ ಆಸ್ಪತ್ರೆಗಳಲ್ಲಿ 9 ಮಂದಿಯನ್ನು ಪ್ರತ್ಯೇಕಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ, ತಪಾಸಣೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಐಟಿ–ಬಿಟಿ ಕಂಪನಿಗಳ ಉದ್ಯೋಗಿಗಳಲ್ಲಿಯೇ ಹೆಚ್ಚಾಗಿ ಈ ಸೋಂಕಿನ ಶಂಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗಿಗಳು ಅನಾರೋಗ್ಯಕ್ಕೆ ಒಳಗಾದಲ್ಲಿ ಕೂಡಲೇ ಮಾಹಿತಿಯನ್ನು ನೀಡುವಂತೆ ಇಲಾಖೆ ಕಂಪನಿಗಳಿಗೆ ಸೂಚಿಸಿದೆ.
ಮಕ್ಕಳು, ವೃದ್ಧರು ಹಾಗೂ ಮಧುಮೇಹದಂತಹ ಕಾಯಿಲೆ ಹೊಂದಿರುವವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರಲಿದೆ. ಹಾಗಾಗಿ ಪರಿಸ್ಥಿತಿ ತಿಳಿಗೊಳ್ಳುವವರೆಗೂಸಾಧ್ಯವಾದಷ್ಟು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿದೆ.ಬಿಬಿಎಂಪಿಯು ತನ್ನ ವ್ಯಾಪ್ತಿಯ ಎಲ್ಲ ರೆಫರಲ್ ಆಸ್ಪತ್ರೆಗಳು, ನಗರ ಆರೋಗ್ಯ ಕುಟುಂಬ ಕಲ್ಯಾಣ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ಎಲ್ಲ ಸಿಬ್ಬಂದಿಗೂ ರಜೆ ಪಡೆಯದೆ ಕರ್ತವ್ಯ ನಿರ್ವಹಿಸುವಂತೆ ಅದೇಶಿಸಿದೆ.
ಇಂಟರ್ನೆಟ್ ವೇಗ ಕುಸಿತ:ನಗರದಲ್ಲಿರುವ ಕೆಲ ಐಟಿ–ಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ. ಆದರೆ, ಮಹದೇವಪುರ ಕ್ಷೇತ್ರದಲ್ಲಿ ಮೂಲಸೌಕರ್ಯ ಕೊರತೆ ಸಮಸ್ಯೆ ಇರುವುದರಿಂದ ಮನೆಯಿಂದಲೇ ಸೂಕ್ತವಾಗಿ ಕೆಲಸ
ನಿರ್ವಹಿಸಲು ಸಾಧ್ಯವಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಮನೆಯಲ್ಲಿಯೇ ಕೆಲಸಮಾಡಲು ಸೂಕ್ತವಾದ ವ್ಯವಸ್ಥೆಯಿಲ್ಲ. ಇಂಟರ್ನೆಟ್ ಸಂಪರ್ಕದಲ್ಲಿನ ತೊಡಕಿನಿಂದ ಕೆಲಸಕ್ಕೆ ತೊಂದರೆಯಾಗುತ್ತಿದೆ’ ಎಂದು ಟೆಕಿ ವಿಷ್ಣು ಪ್ರಸಾದ್ ಬೇಸರ ವ್ಯಕ್ತಪಡಿಸಿದರು.
ಐಟಿ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ವೈಟ್‍ಫೀಲ್ಡ್, ಮಾರತ್ತಹಳ್ಳಿ, ಮಹದೇವಪುರ, ಬೆಳ್ಳಂದೂರು, ಎಲೆಕ್ಟ್ರಾನಿಕ್ ಸಿಟಿ ಸುತ್ತಲಿನ ಪ್ರದೇಶಗಳಲ್ಲಿ ಇಂಟರ್ನೆಟ್ ವೇಗ ಕಡಿಮೆಯಾಗಿದೆ.
ರಾಜೀವ್ ಗಾಂಧಿ ಆಸ್ಪತ್ರೆ: ರೋಗಿಗಳ ಸಂಖ್ಯೆ ಹೆಚ್ಚಳ
ಜ್ವರ, ಕೆಮ್ಮು, ನೆಗಡಿ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಒಂದೇ ಸಮನೆ ಹೆಚ್ಚಳವಾಗುತ್ತಿದೆ. ಕೆಲವರು ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನನಗೆ ರೋಗದ ಲಕ್ಷಣ ಕಾಣಿಸಿಕೊಂಡಿದೆ. ಆದರೆ, ಇಲ್ಲಿನ ವೈದ್ಯರು ಸೋಂಕು ಪ್ರಕರಣ ವರದಿಯಾದ ದೇಶಗಳಿಗೆ ಹೋಗಿ ಬಂದವರನ್ನು ಮಾತ್ರ ಪರೀಕ್ಷೆ ಮಾಡುತ್ತಿದ್ದಾರೆ. ಇಲ್ಲಿನವರಿಗೆ ಲಕ್ಷಣಗಳು ಕಾಣಿಸಿಕೊಂಡಲ್ಲಿ ಎಲ್ಲಿಗೆ ಹೋಗಬೇಕು’ ಎಂದುಖಾಸಗಿ ಕಂಪನಿಯೊಂದರ ಉದ್ಯೋಗಿ ಕಾರ್ತಿಕ್ ಪ್ರಶ್ನಿಸಿದರು.
ಈ ಬಗ್ಗೆ ಆಸ್ಪತ್ರೆಯನೋಡಲ್ ಅಧಿಕಾರಿ ಡಾ.ಯು.ಜಿ. ದೀಪಕ್ ಪ್ರತಿಕ್ರಿಯಿಸಿ, ‘ಸರ್ಕಾರದ ಮಾರ್ಗಸೂಚಿಯಂತೆಯೇ ತಪಾಸಣೆ ಮಾಡಲಾಗುತ್ತಿದೆ. ಸೋಂಕು ಪ್ರಕರಣ ವರದಿಯಾದ ವಿದೇಶಕ್ಕೆ ಹೋಗಿ ಬಂದವರು ಹಾಗೂ ಅವರೊಂದಿಗೆ ಸಂಪರ್ಕ ಹೊಂದಿರುವವರನ್ನು ತಪಾಸಣೆ ಮಾಡಲು ಪ್ರತ್ಯೇಕ ಹೊರರೋಗಿ ವಿಭಾಗ ಸ್ಥಾಪಿಸಲಾಗಿದೆ. ಅನಗತ್ಯವಾಗಿ ಜನತೆ ಭೀತಿಗೆ ಒಳಗಾಗುತ್ತಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.